ಗದಗ : ಕುಡಿಯುವ ನೀರಿನ ಸಮಸ್ಯೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇಂದು ನಗರದ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ನಗರದ ಹೊಂಬಳ ಗ್ರಾಮದ ರಸ್ತೆಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀರಿನ ಅಭಾವ ಉಂಟಾಗಿದೆ. ಜಿಲ್ಲೆಯ ಮಹತ್ವದ ಯೋಜನೆಯಾಗಿರುವ 24/7 ಕುಡಿಯುವ ನೀರು ಸರಬರಾಜುವಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದರೂ, ಎರಡು ವರ್ಷಗಳಿಂದ ಕಾಲೇಜಿಗೆ ನದಿ ನೀರು ಒಂದು ಹನಿ ಸಹಿತ ನೀರು ಪೂರೈಕೆ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ಲೋರೈಡ್‌ಯುಕ್ತ ನೀರನ್ನೇ ಕುಡಿಯುತ್ತಿದ್ದಾರೆ. ಪಶುವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಸೇರಿ ಒಟ್ಟು ಮಹಾವಿದ್ಯಾಲಯದಲ್ಲಿ 500 ಜನ ಇದ್ದಾರೆ. ಬಹುತೇಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಕುಟುಂಬಗಳು ಇಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಸರಿಯಾದ ಮೂಲ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು, ಸಿಬ್ಬಂದಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ರೈಲ್ವೆ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದ್ದು, ಪದೇ ಪದೇ ಕಾಲೇಜಿಗೆ 24/7 ನೀರು ಸರಬರಾಜು ಮಾಡುವ ಪೈಫ್‌ಲೈನ್ ಒಡೆಯುತ್ತಿದೆ. ಹೀಗಾಗಿ ಕಾಲೇಜಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಪ್ಲೋರೈಡ್ ಅಂಶವಿರುವ ನೀರಿನ ಬಳಕೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳು ಸ್ನಾನಕ್ಕೆ, ಕುಡಿಯುವುದಕ್ಕೆ ಪ್ಲೋರೈಡ್ ನೀರನ್ನೇ ಆಶ್ರಯಿಸಿದ್ದಾರೆ. ಇದರಿಂದ ಚರ್ಮರೋಗದಂತಹ ಕಾಯಿಲೆಗಳು ಬರುತ್ತಿ ಎಂತೆ. ಹೀಗಾಗಿ ವಿದ್ಯಾರ್ಥಿಗಳ ಮೈಮೇಲಿನ ಚರ್ಮವೆಲ್ಲಾ ಪೊರೆ ಕೀಳುತ್ತಿದೆ. ಕೂದಲು ಉದುರುವ ಸಮಸ್ಯೆಯನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರಂತೆ. ಇನ್ನು ನೀರಿನ ಸಮಸ್ಯೆಯ ಕುರಿತು ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಲೋಕೋಪಯೋಗಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ಹಾರಿಕೆ ಉತ್ತರ ಕೊಟ್ಟು ಕಳುಹಿಸುತ್ತಿದ್ದಾರೆ. ಅಲ್ಲದೇ, ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತೆಂಬಂತೆ ರೈಲ್ವೆ ಹಾಗೂ ಲೋಕೋಪಯೋಗಿ ಇಲಾಖೆಯವರ ಸಮನ್ವಯ ಕೊರತೆಯಿಂದಾಗಿ ಸದ್ಯ ಪಶುವೈದ್ಯಕೀಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಕಾಲೇಜಿಗೆ ಬಂದು ನಾಲ್ಕು ವರ್ಷ ಆಗಿದೆ. ಇಲ್ಲಿಯವರೆಗೂ ಸರಿಯಾಗಿ ನೀರು ಸಿಗುತ್ತಿಲ್ಲ. ಇಡೀ ಕಾಲೇಜಲ್ಲಿ ಒಂದೇ ಬೋರ್‌ವೆಲ್ ಇದೆ. ಇದರಿಂದ ನೀರು ಸಾಲುತ್ತಿಲ್ಲ. ಇದರಿಂದ ಕಲಿಕೆ ಒಂದೆಡೆ ಇರಲಿ, ಇಲ್ಲಿ ನೀರಿಗೂ ಕಷ್ಟ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾಲೇಜಿನಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಅಂತಿದ್ದಾಳೆ ವಿದ್ಯಾರ್ಥಿನಿ ಶ್ರೇಯಾ ಅವರು.
ಇನ್ನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನೀರಿನ ಅಭಾವ ತುಂಬಾನೇ ಕಾಡುತ್ತಿದೆ. ಇದರಿಂದ ಸಿಬ್ಬಂದಿ ಹಾಗೂ ಜಾನುವಾರುಗಳಿಗೆ ಸಮಸ್ಯೆಯಾಗುತ್ತಿದೆ. ಸುಮಾರು 1500ರಷ್ಟು ಪ್ಲೋರೈಡ್ ಅಂಶವಿರುವ ನೀರಿನ ಬೋರ್‌ವೆಲ್ ಇದೆ. ಇದರಿಂದ ವೈದ್ಯನಾಗಿ ನನಗೆ ತುಂಬಾ ನೋವಾಗುತ್ತಿದೆ. ಪ್ಲೋರೈಡ್‌ಯುಕ್ತ ನೀರಿನ ಬಳಕೆಯಿಂದ ವಿದ್ಯಾರ್ಥಿಗಳ ದೇಹವೆಲ್ಲಾ ವಿಷಯುಕ್ತವಾಗುತ್ತಿದೆ. ಇದು ಮುಂದೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಹಾವಿದ್ಯಾಲಯದ ಡೀನ್ ಡಾ.ಆರ್.ನಾಗರಾಜ್.
ಕುಡಿಯುವ ನೀರು ಸರಬರಾಜು ಕುಡಿಯುವ ಪೈಪಲೈನ್ ಅಳವಡಿಕೆಯ ಕಾಮಗಾರಿ 2015-16೬ರಲ್ಲಿಯೇ ಪೂರ್ಣಗೊಂಡಿದೆ. ಆದರೆ ಈ ಮಾರ್ಗದಲ್ಲಿ ರೈಲ್ವೆ ಇಲಾಖೆಯಿಂದ ಎಂಬ್ಯಾಕ್ ಟ್ರ್ಯಾಕ್ ನಿರ್ಮಾಣವಾಗುತ್ತಿರುವುದರಿಂದ ಪೈಪ್‌ಲೈನ್ ಒಡೆದಿದೆ. ಇದರಿಂದ ಪಶುವೈದ್ಯಕೀಯ ಕಾಲೇಜಿನಲ್ಲಿ ನೀರಿನ ಸಮಸ್ಯೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಹಕರಿಸಬೇಕು. ಏನೇ ಸಮಸ್ಯೆಗಳಿದ್ದರೂ ಒಂದು ವಾರದಲ್ಲಿ ನೀರು ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯೂಡಿ ಇಲಾಖೆ ಎಇಇ ಆರ್.ಎನ್.ರಾಥೋಡ್ ತಿಳಿಸಿದ್ದಾರೆ