ಬೆಳಗಾವಿ (ಮಾ. 7): ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಕೇವಲ ಅಡುಗೆ ಮಾಡೋದು ಮಕ್ಕಳು ಸಂಸಾರ ನೋಡಿಕೊಂಡು ಹೋಗುವವರೇ ಜಾಸ್ತಿ. ಆದರೆ, ಇಲ್ಲೋರ್ವ ಮಹಿಳೆ ತನ್ನ ಸಂಸಾರ ಜೊತೆಗೆ ಇತರೆ 40 ಜನರ ಸಂಸಾರಕ್ಕೂ ಆಸರೆಯಾಗಿದ್ದಾರೆ. ಅವರ ಒಂದೇ ಒಂದು ಕೆಲಸ 40 ಕುಟುಂಬಗಳಿಗೆ ಆಸರೆಯಾಗಿದೆ. ಹಾಗಾದರೆ ಯಾರು ಆ ಮಹಿಳೆ? ಏನು ಆ ಕೆಲಸ ಅಂತೀರಾ? ಈ ಸ್ಟೋರಿ ಓದಿ…
‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು’ ಎಂಬ ಮಾತಿನಂತೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಸಾಧನೆಯ ಶಿಖರವನ್ನೇರಿ ಪುರುಷರಿಗಿಂತ ತಾವೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕ್ರತಿ ಎಲ್ಲ ವಿಭಾಗಗಳಲ್ಲೂ ಸಹ ಮಹಿಳೆಯರೇ ಈಗ ಎತ್ತಿದ ಕೈ. ಆದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ತನ್ನೊಂದಿಗೆ ಬೆಳೆಯೋ ಅವಕಾಶ ಕೊಟ್ಟು ತನ್ಮೂಲಕ ಅವರನ್ನೂ ಬೆಳೆಸುತ್ತಿರುವ ಈ ತಾಯಿಯ ಹೆಸರು ಮಹಾದೇವಿ ಕಬ್ಬೂರು. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದವರು.ಮೊದ ಮೊದಲು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ್ದ ಮಹಾದೇವಿ ರಾತ್ರಿ ಶಾಲೆ ನಡೆಸಿ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡುತ್ತಿದ್ದರು. ಆ ಸಮಯಲ್ಲಿ ಹುಟ್ಟಿದ ಚಿಂತನೆಯೊಂದು ಈಗ 40 ಜನರ ಬದುಕು ಹಸನಾಗಿಸಿದೆ. ರೊಟ್ಟಿ ಮಾಡುವ ವ್ಯಾಪಾರ ಎಲ್ಲರ ಕೈ ಹಿಡಿದಿದ್ದು ಈಗ ಬೃಹತ್ ವ್ಯಾಪಾರವಾಗಿ ಬೆಳೆದಿದೆ. ಅಲ್ಲದೆ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿ ಮಾಡಿದೆ.
ಹೌದು, ರಾತ್ರಿ ಶಾಲೆ ನಡೆಸುವ ಸಮಯದಲ್ಲಿ ಹುಟ್ಟಿದ ಯೋಜನೆಯೊಂದು ಇಂದು ಸಾಕಾರಗೊಂಡಿದೆ ಹಾರೂಗೇರಿ ಪಟ್ಟಣದಲ್ಲಿ ಸುಮಾರು 40 ಮನೆಗಳಲ್ಲಿ ದಿನ ಒಂದಕ್ಕೆ ಸುಮಾರು 4 ಸಾವಿರಕ್ಕೂ ಹೆಚ್ಚು ವಿವಿಧ ರೀತಿಯ ರೊಟ್ಟಿಗಳು ತಯಾರಾಗುತ್ತವೆ. ಈ ರೊಟ್ಟಿಗಳಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಇದೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು, ಮುಂಬೈ, ಪುಣೆಗೆ ಇಲ್ಲಿನ ರೊಟ್ಟಿಗಳು ಹೋಗುತ್ತವೆ. ಅಲ್ಲದೆ, ದೂರದ ಅಮೆರಿಕಕ್ಕೂ ಸಹ ಹಾರೂಗೇರಿ ಪಟ್ಟಣದಿಂದ ರೊಟ್ಟಿ ರಫ್ತಾಗುತ್ತಿದ್ದು, ಅಮೆರಿಕದಿಂದಲೂ ಸಹ ಇಲ್ಲಿನ ರೊಟ್ಟಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ರೊಟ್ಟಿ ತಯಾರಿಕಾ ಘಟಕದ ಮುಖ್ಯಸ್ಥೆ ಮಹಾದೇವಿ ಕಬ್ಬೂರು.
ಇನ್ನು, ಪ್ರಧಾನಿ ನರೇಂದ್ರ ಮೋದಿ ಕಂಡಿರುವ ಭಾರತ ಆತ್ಮನಿರ್ಭರ ಕನಸಿಗೆ ಮಹಾದೇವಿ ಅವರು ಮುನ್ನುಡಿ ಆಗಿದ್ದಾರೆ ಅಂತಾನೇ ಹೇಳಬಹುದು. ಕೇವಲ ತಾನು ಬೆಳೆದರೆ ಮಾತ್ರ ಸಾಲದು ಎಂಬ ಉದ್ದೇಶದಿಂದ 40 ಕುಟುಂಬಗಳನ್ನು ಬೆಳೆಸುತ್ತಾ ಬಂದಿದ್ದಾರೆ. 40 ಕುಟುಂಬದ ಮಹಿಳೆಯರು ರೊಟ್ಟಿಗಳನ್ನು ತಯಾರಿಸಿದರೆ ಆ ರೊಟ್ಟಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹೊಣೆ ಮಹಾದೇವಿ ಅವರದ್ದಾಗಿದೆ. ಬಳಿಕ ಬಂದ ಹಣದಲ್ಲಿ ಎಲ್ಲರೂ ಲಾಭವನ್ನು ಗಳಿಸುತ್ತಿದ್ದಾರೆ. ಈ ಮೂಲಕ ಆತ್ಮನಿರ್ಭರ ಭಾರತದ ಕನಸಿಗೆ ನಾಂದಿ ಆಗಿದ್ದಾರೆ ಎಂದು ಹೇಳಬಹುದು.ಒಟ್ಟಿನಲ್ಲಿ, ಗ್ರಾಮೀಣ ಭಾಗದ ಮಹಿಳೆಯರಿಗೆ ರೊಟ್ಟಿ ಮಾಡುವ ಉದ್ಯೋಗ ನೀಡಿ ಅವರೂ ಸ್ವಾವಲಂಬಿಯಾಗಿ ಜೀವನ ಮಾಡಲು ಮಹಾದೇವಿ ಕಾರಣರಾಗಿದ್ದಾರೆ. ಕೇವಲ ತಾವು ಮಾತ್ರ ಬೆಳೆಯದೆ 40 ಕುಟುಂಗಳಿಗೆ ಆಶ್ರಯವಾಗಿರುವ ಮಹಾದೇವಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.
 Laxmi News 24×7
Laxmi News 24×7
				 
		 
						
					 
						
					 
						
					