ಬೆಂಗಳೂರು, ಜು.21- ನಾನು ಎಂಥದ್ದೇ ಸಂಧರ್ಭದಲ್ಲೂ ಹಿಂದೂ ದೇವರಿಗೆ ಅವಮಾನ ಮಾಡುವಂತಹ ಕೆಟ್ಟ ಕೆಲಸವನ್ನು ಮಾಡುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ನಾನು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.
ನನ್ನ ಶುಗರ್ಸ್ ಕಂಪೆನಿ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಿಂದ ಸಿಬ್ಬಂದಿಯೊಬ್ಬರು ಅಚಾತುರ್ಯವಾಗಿ ಈ ಸುದ್ದಿಯನ್ನು ರವಾನೆ ಮಾಡಿದ್ದಾರೆ. ಈ ಕೃತ್ಯಕ್ಕೆ ಆ ಸಿಬ್ಬಂದಿ ವಿರುದ್ಧ ಕ್ರಮವನ್ನೂ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.ನನಗೆ ಹಿಂದೂ, ಮುಸ್ಲಿಂಘಿ, ಕ್ರೈಸ್ತ ಸೇರಿದಂತೆ ಎಲ್ಲ ದೇವರುಗಳು ಹಾಗೂ ಆ ಧರ್ಮಗಳ ನಂಬಿಕೆ ಮೇಲೆ ಶ್ರದ್ಧೆ ಹಾಗೂ ಭಕ್ತಿ ಇದೆ. ಎಲ್ಲ ಧರ್ಮವನ್ನೂ ಗೌರವಿಸಿ ಸರ್ವ` ಧರ್ಮಗಳಲ್ಲೂ ನಂಬಿಕೆ ಇಟ್ಟಿದ್ದೇನೆ. ಒಂದು ವೇಳೆ ನನ್ನ ಸಿಬ್ಬಂದಿ ಮಾಡಿರುವ ಅಚಾತುರ್ಯದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ಪ್ರತಿದಿನ ಬೆಳಗ್ಗೆ ನಾನು ದೇವರ ಪೂಜೆ ಮಾಡದೆ ನೀರು ಮತ್ತು ಆಹಾರ ಸೇವಿಸುವುದಿಲ್ಲ. ನನ್ನ ಸಿಬ್ಬಂದಿ ಮಾಡಿರುವ ಅಚಾತುರ್ಯಕ್ಕೆ ಜನತೆಯಲ್ಲಿ ಕ್ಷಮೆ ಯಾಚಿಸಿ ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸುವುದಾಗಿ ನಿರಾಣಿ ಸ್ಪಷ್ಟಪಡಿಸಿದ್ದಾರೆ.