ಬೆಂಗಳೂರು: ಸಿಎಂ ಯಡಿಯೂರಪ್ಪ ಹೇಳಿದ್ದರು, ಬಿಐಇಸಿ(ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ)ಯಲ್ಲಿ ದೊಡ್ಡ ಕೋವಿಡ್ ಸೆಂಟರ್ ಮಾಡಿದ್ದೇವೆ ಅಂತ, ಅದಕ್ಕೆ ಹೇಗಿದೆ ಅಂತ ನೋಡೋಕೆ ಬಂದಿದ್ದೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪ್ರಾರಂಭಿಸಿರುವ ಕೊವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಇನ್ನೂ ಸಂಪೂರ್ಣ ಕೆಲಸ ಆಗಿಲ್ಲ, ನಾವು ಮಾರ್ಚ್ನಲ್ಲೇ ಈ ಬಗ್ಗೆ ಸಲಹೆ ಕೊಟ್ಟಿದ್ದೆ. ಆದರೆ, ಬಹಳ ವಿಳಂಬವಾಗಿ ಮಾಡಿದ್ದಾರೆ ಎಂದರು.
ಇನ್ನು ಬೆಡ್ ಇಲ್ಲದೆ ಸತ್ತು ಹೋಗುತ್ತಿದ್ದಾರೆ ಅಂತ ನೀವೇ ಹೇಳ್ತೀರ. ಸರ್ಕಾರಕ್ಕೆ ಸಾಕಷ್ಟು ಸಮಯವಿತ್ತು. 4 ತಿಂಗಳಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕಿತ್ತು. 1,800 ಡಾಕ್ಟರ್ಸ್ಗಳು ಇಲ್ಲಿಗೆ ಬೇಕು. ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಬೇಕು. ಶುಕ್ರವಾರದಿಂದ ಇಲ್ಲಿಗೆ ಅಡ್ಮಿಶನ್ ಅಂತ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ 800 ರೂ. ಬಾಡಿಗೆ ಕೊಡುತ್ತೇವೆ ಅಂತ ಹೇಳಿದ್ದರು ಇದರ ಬಗ್ಗೆ ನಾವು ಟೀಕೆ ಮಾಡಿದ್ದೆವು. ಈಗ ಕ್ರಯಕ್ಕೆ ತೆಗೆದುಕೊಳ್ಳುವ ಬಗ್ಗೆ ಹೇಳುತ್ತಿದ್ದಾರೆ. ಇನ್ನೂ ಯಾವುದೇ ತೀರ್ಮಾನ ಹೊರಬಿದ್ದಿಲ್ಲ, ಪ್ರತಿ ವಾರ್ಡ್ನಲ್ಲಿ 120 ಬೆಡ್ ಇರುತ್ವೆ. ರೋಗ ಉಲ್ಬಣಗೊಂಡರೆ ಇತರರಿಗೂ ಕಷ್ಟವಾಗಲಿದೆ. ಒಂದೇ ವಾರ್ಡ್ನಲ್ಲಿ ಓಡಾಡೋದ್ರಿಂದ ಕಷ್ಟ. ಜೊತೆಗೆ ಕೂಡಲೇ ವೈದ್ಯರ ಕೊರತೆ ತುಂಬಬೇಕು. ರೋಗಿಗಳ ಕಡೆಯವರಿಗೆ ಇಲ್ಲಿರೋಕೆ ಅವಕಾಶವಿರಲ್ಲ, ಮೊದಲೇ ಇದರ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ, ಕೊನೆಯಲ್ಲಿ ಮಾಡೋದನ್ನು ಮೊದಲು ಮಾಡುತ್ತಿದ್ದಾರೆ ಎಂದು ಅವರು ರಾಜ್ಯ ಸರ್ಕಾರದ ಲೋಪಗಳನ್ನು ಹೇಳಿದರು.
ಎ ಸಿಂಪ್ಟಮ್ಯಾಟಿಕ್ ಇರೋರಿಗೆ ಇಲ್ಲಿ ಅವಕಾಶವಿದೆ ಇದನ್ನು ಎಷ್ಟರ ಮಟ್ಟಿಗೆ ಮೇಂಟೇನ್ ಮಾಡ್ತಾರೆ ನೋಡಬೇಕು. ಸರ್ಕಾರ ಉದಾಸೀನ ತೋರಿಸಿದ್ದು ಸ್ಪಷ್ಟವಾಗಿದೆ. ಸೋಂಕು ಉಲ್ಬಣದ ಬಗ್ಗೆ ತಜ್ಙರು ಮೊದಲೇ ಎಚ್ಚರಿಸಿದ್ದರು. ಆದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ, ರಾಜ್ಯ, ಕೇಂದ್ರದ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಎರಡೂ ಸರ್ಕಾರ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಯಾರನ್ನೂ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ, ಸರ್ವಾಧಿಕಾರಿ ಮನೋಭಾವ ಧೋರಣೆ ಸರ್ಕಾರದ್ದು. ಎಲ್ಲಾ ಅಗತ್ಯ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವೆಂಟಿಲೇಟರ್ ಖರೀದಿ ಅವ್ಯವಹಾರ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ 4 ಲಕ್ಷಕ್ಕೆ ಖರೀದಿ ಮಾಡಿದೆ. ತಮಿಳುನಾಡು 8 ಲಕ್ಷದ 78 ಸಾವಿರಕ್ಕೆ ಖರೀದಿಸಿದೆ. ಇವರು 18 ಲಕ್ಷಕ್ಕೆ ಖರೀದಿಸಿದ್ದಾರೆ. ಹೀಗಾಗಿ ಗುರುವಾರ ದಾಖಲೆ ಸಮೇತ ಬಹಿರಂಗ ಮಾಡುತ್ತೇನೆ ಎಂದು ವಿಶ್ವಾಸದಿಂದ ಮಾತನಾಡಿದರು.
ಅದುವಲ್ಲದೇ, ಕ್ವಾಲಿಟಿ ಬಗ್ಗೆ ಹೇಳೋಕೆ ನಾನೇನು ಸರ್ವಜ್ಞನಲ್ಲ, ಐದಾರು ಇಲಾಖೆಗಳಿಂದ ಅವ್ಯವಹಾರ ನಡೆದಿದೆ. ನಾನು ಮಾಹಿತಿ ಕೇಳಿ ಒಂದು ವಾರವಾಯ್ತು. ಇನ್ನೂ ಉತ್ತರವನ್ನೇ ಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ದೇವರ ಅವಹೇಳನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ಅವರಿಗೆ ದೇವರಲ್ಲಿ ನಂಬಿಕೆ ಇದ್ಯಾ(?) ಇಲ್ವಾ(?) ಹೇಳಲಿ. ದೇವರಿದ್ದಾನೆ ಅನ್ನೋದು ಸರ್ವವಿದಿತ. ದೇವರ ಬಗ್ಗೆ ಅವಹೇಳನ ಮಾಡೋದು ಸರಿಯಲ್ಲ, ದೇವರ ಬಗ್ಗೆ ನಂಬಿಕೆ ಇಟ್ಟವರಿಗೆ ಅವಹೇಳನ ಮಾಡಿದಂತೆ ಹಾಗೆ ಮಾತನಾಡಿದ್ದರೆ ಅದು ಉದ್ಧಟತನದ ಪರಮಾವಧಿ. ಅಧಿಕಾರ, ಹಣ ಅವರನ್ನು ಹೀಗೆ ಮಾಡಿಸ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.