ಬೆಂಗಳೂರು: ಭೀಮನ ಅಮಸ್ಯೆ ದಂಪತಿಗೆ ಪವಿತ್ರ ದಿನವಾಗಿದ್ದು, ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ ಮಾಡುತ್ತಾರೆ. ಈ ಕ್ಷಣಗಳನ್ನು ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಪತ್ನಿಯ ಪಾದ ಪೂಜೆಯಿಂದ ಜಾಕ್‍ಪಾಟ್ ಹೊಡಿಯಲಿದೆ ಎಂದು ಬರೆದಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಸುಂದರ ಕ್ಷಣಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು. ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. ಈಗ ಪಾದಪೂಜೆ ಮಾಡಿದೀಯ ನನ್ಮಗಂದು ಇನ್ಮೇಲೆ ಜಾಕ್ಪಾಟ್. ಭೀಮನ ಅಮಾವಾಸ್ಯೆ ಶುಭಾಶಯಗಳು. ಸ್ಟೇ ಲವ್ಲಿ ಎಂದು ಬರೆದು ತಮ್ಮ ಪತ್ನಿಗೆ ಟ್ಯಾಗ್ ಮಾಡಿದ್ದಾರೆ.
ಪ್ರೇಮ್ ಮತ್ತು ಜ್ಯೋತಿ ಮೂರು ವರ್ಷ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದಾರೆ. ದಂಪತಿಗೆ ಅಮೃತಾ, ಏಕಾಂತ್ ಇಬ್ಬರು ಮಕ್ಕಳಿದ್ದಾರೆ. ಸುಂದರ ಸಂಸಾರವನ್ನು ಪ್ರೇಮ್ ದಂಪತಿ ನಡೆಸುತ್ತಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಇದೀಗ ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಸಿನಿಮಾದಲ್ಲಿ ಪ್ರೇಮ್, ಹೊಸ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ತುಂಬಾ ಎಚ್ಚರದಿಂದ ಇರುವ ಅವರು, ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ತುಂಬಾ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದು, ಅಷ್ಟೇ ಚೆನ್ನಾಗಿ ನಟಿಸುತ್ತಿದ್ದಾರಂತೆ. ರಾಘವೇಂದ್ರ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಪ್ರೇಮ್ ಈ ಸಿನಿಮಾದಲ್ಲಿ ನಾಲ್ಕು ಶೇಡ್ ಉಳ್ಳ ಪಾತ್ರವನ್ನು ಮಾಡುತ್ತಿದ್ದಾರಂತೆ. ಅಲ್ಲದೆ ಇನ್ನೂ ವಿಶೇಷ ಎಂಬಂತೆ ಮೂರನೇ ಬಾರಿಗೆ ನಾಯಕಿಯಾಗಿ ಐಂದ್ರಿತಾ ರೇ ಪ್ರೇಮ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.