ಬೆಂಗಳೂರು: ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ….
ಇದು ನಟ ಜಗ್ಗೇಶ್ ಅವರ ಕಟು ಆಕ್ರೋಶದ ಮಾತು.
ಮೈಸೂರು ಸಮೀಪ ತಿ. ನರಸೀಪುರದ ಅತ್ತಳ್ಳಿಯಲ್ಲಿ ದರ್ಶನ್ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದ ಜಗ್ಗೇಶ್ ಅವರು ಘಟನೆಯ ಸಂದರ್ಭ ಇದ್ದ ಯುವಕರಿಗೆ ಹಾಗೂ ಚಿತ್ರರಂಗದ ಪ್ರಮುಖರಿಗೆ ಕಟು ಮಾತುಗಳಲ್ಲಿ ಎಚ್ಚರಿಕೆಯನ್ನೂ ನೀಡಿದರು.
‘ನನಗೆ ಬುದ್ಧಿಹೇಳಬೇಕಾದವರು ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ ಒಬ್ಬ ನಟ, ಅವನ ಅಭಿಮಾನಿಗಳು ನನ್ನ ಬಳಿ ಬರಲು ಆಗುವುದಿಲ್ಲ. ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನನ್ನು ಅವಮಾನ ಮಾಡಲು ಬರಬೇಡಿ. ಇಂಥ ಸ್ಥಿತಿಗತಿಗಳನ್ನು ಶುರು ಮಾಡಿದರೆ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಶುರುವಾಗುತ್ತದೆ’ ಎಂದು ಅಸಹನೆ ಹೊರಹಾಕಿದರು.
‘ಇವತ್ತು ಒಬ್ಬ ನಟನ ಚಿತ್ರ ಹಿಟ್ ಆಯಿತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡುತ್ತಾನೆ. ನಾನೊಬ್ಬನೇ ಉಳಿಯಬೇಕು. ನನ್ನೊಬ್ಬನ ಚಿತ್ರವೇ ಓಡಬೇಕು ಅನ್ನುವುದು ಇದೆ. ಈ ತರಹ ಘೇರಾವ್ ಮಾಡೋದು, ತುಳಿಯುವುದು ದರಿದ್ರ ರಾಜಕಾರಣದಲ್ಲಿ ಇದೆ. ಯಾವುದೋ ಒಂದು ಸಣ್ಣ ವಿಷಯವನ್ನಿಟ್ಟುಕೊಂಡು ಜಗ್ಗೇಶ್‌ಗೆ ಅವಮಾನ ಮಾಡುತ್ತೀದ್ದೇವೆ ಅಂತ ನೀವು ಭಾವಿಸಿದ್ದರೆ, ನನಗೆ ಯಾವ ನೋವೂ’ ಇಲ್ಲ ಎಂದಿದ್ದಾರೆ.
‘ನಿನ್ನೆ ಬಂದ ಹುಡುಗರ ಮುಂದೇನೇ ಕುಳಿತುಕೊಂಡು ಮಾತನಾಡಿದ್ದೇನೆ. ಓಡಿಹೋಗಿಲ್ಲ. ಯಾವುದಾದರೂ ಆಸ್ತಿ ಹೊಡೆಯುವ ಮಾತನಾಡಿಲ್ಲ. ಯಾವುದಾದರೂ ಕಾಂಟ್ರ್ಯಾಕ್ಟ್ ಬಗ್ಗೆ, ಕೋಟ್ಯಂತರ ರೂಪಾಯಿ ವಂಚನೆ ಮಾಡುವ ಬಗ್ಗೆ ಮಾತನಾಡಿದ್ದೇನಾ? ಯಾರಿಗಾದರೂ ನೋವು ಕೊಡೋಣ ಎಂದು ಮಾತನಾಡಿದ್ದೇನಾ? ಯಾರನ್ನಾದರೂ ಕೊಲೆ ಮಾಡೋಣ ಅಂತ ಮಾತನಾಡಿದ್ದೇನಾ? ಅಥವಾ ಕನ್ನಡದ ನೆಲಕ್ಕೆ ಅವಮಾನ ಆಗುವ ರೀತಿ ಮಾತನಾಡಿದ್ದೇನಾ?’ ಎಂದು ಪ್ರಶ್ನಿಸಿದ್ದಾರೆ.
‘ಮೇಕಪ್’ ಮಾಡಿ ₹35 ಕೋಟಿ ಮೌಲ್ಯದ ಆಸ್ತಿ ಕಳೆದುಕೊಂಡಿದ್ದ ಜಗ್ಗೇಶ್!
‘ನಾನು ಖಾಸಗಿಯಾಗಿ ಮಾತನಾಡಿದ್ದೇನೇ ವಿನಃ, ನಿಮ್ಮ ಟಿವಿಯಲ್ಲಿ ಬಂದು ಮಾತನಾಡಿದ್ದೇನಾ? ಖಾಸಗಿಯಾಗಿ ಮಾತನಾಡಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಕುತಂತ್ರ ವ್ಯವಸ್ಥೆ ಇದೆ ಎಂದು ಗೊತ್ತಾಗಿದೆ. ನಾನು ತಪ್ಪೇ ಮಾತನಾಡಿಲ್ಲ. ಯಾಕೆ ಹೆದರಿಕೊಳ್ಳಲಿ? ಅಲ್ಲಿ ನನಗೆ ಯಾರಾದರೂ ಹೊಡೆಯಲು ಬಂದಿದ್ದರಾ? ಯಾರಿಗೆ ನನ್ನನ್ನು ಮುಟ್ಟುವ ಧೈರ್ಯ ಇದೆ?’ ಎಂದು ಗುಡುಗಿದ್ದಾರೆ.