ಬೆಂಗಳೂರು, ಜ.23- ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿದರು.ಶೇ.30ರಷ್ಟು ಶುಲ್ಕ ಕಡಿತ ಮಾಡಿರುವುದರಿಂದ ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ಮೆಜಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸಾವಿರಾರು ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ್ಯಾಲಿ ನಡೆಸಿ ಸರ್ಕಾರ ಈ ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಪುಟ್ಟಣ್ಣ, ಸಂಘಟನೆ ಸಂಚಾಲಕ ಡಿ.ಶಶಿಕುಮಾರ್ ಮುಂತಾದವರು ಸರ್ಕಾರದ ಕ್ರಮವನ್ನು ಖಂಡಿಸಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ದುಸ್ತರವಾಗಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ಯಾವುದೇ ನೆರವು ನೀಡಲಿಲ್ಲ.
ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ರಾಯಚೂರು, ಗುಲ್ಬರ್ಗಾ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು ಶುಲ್ಕ ಕಡಿತವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
Laxmi News 24×7