Breaking News

ಮೀಸಲಾತಿ ದೊರಕದೇ ಪೀಠಕ್ಕೆ ಮರಳುವುದಿಲ್ಲ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Spread the love

ಬೆಂಗಳೂರು: ‘ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಸಿಗುವವರೆಗೂ ಪೀಠಕ್ಕೆ ಮರಳುವುದಿಲ್ಲ’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.

ಮೀಸಲಾತಿಗಾಗಿ ಆಗ್ರಹಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮಗೆ ನಿಗಮ, ಮಂಡಳಿ ಅಥವಾ ಅನುದಾನ ಬೇಡ. ‘2ಎ’ ಮೀಸಲಾತಿಯೇ ನಮ್ಮ ಬೇಡಿಕೆ. ಅದು ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

ಮೀಸಲಾತಿಗಾಗಿ 2012ರಿಂದಲೂ ನಡೆಯುತ್ತಿದ್ದ ಹೋರಾಟ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ. ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಇದು. ಪಾದಯಾತ್ರೆ ಮತ್ತು ಸಮಾವೇಶದಿಂದ ಹೋರಾಟ ಅಂತ್ಯಗೊಂಡಿದೆ ಎಂದು ಯಾರೂ ಭಾವಿಸಬಾರದು. ಇದು ಅಂತ್ಯವಲ್ಲ, ಆರಂಭ ಎಂದು ಹೇಳಿದರು.

‘ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ನೀಡಿದರು. ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಅನೇಕ ಸಮುದಾಯಗಳಿಗೆ ಮೀಸಲಾತಿ ನೀಡಿದರು. ಈಗ ನಮ್ಮದೇ ಲಿಂಗಾಯತ ಸಮುದಾಯದ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಅವರಲ್ಲದೇ ಇನ್ಯಾರು ಪಂಚಮಸಾಲಿ ಜನರಿಗೆ ಮೀಸಲಾತಿ ನೀಡಲು ಸಾಧ್ಯ’ ಎಂದು ಸ್ವಾಮೀಜಿ ಪ್ರಶ್ನಿಸಿದರು.

ಈಗ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿಗಾಗಿ ಹೋರಾಟ ನಡೆದಿದೆ. ಮುಂದಿನ ದಿನಗಳಲ್ಲಿ ಲಿಂಗಾಯತ
ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಲು ಸಿದ್ಧ ಎಂದರು.

ಸಮಾಜದ ಋಣ ತಮ್ಮ ಮೇಲಿದೆ. ಅದನ್ನು ಈಡೇರಿಸುವುದಕ್ಕಾಗಿ ಮೀಸಲಾತಿಗಾಗಿ ಹೋರಾಟ ಆರಂಭಿಸಲಾಗಿದೆ. ಪಾದಯಾತ್ರೆಯ ಆರಂಭದಲ್ಲಿ ಜನರು ಬೆಂಬಲಿಸದೇ ಇರಬಹುದು ಎಂಬ ಅಳುಕಿತ್ತು. ಆದರೆ, ನಿರೀಕ್ಷೆಗೂ ಮೀರಿ ಜನರು ಪಾದಯಾತ್ರೆಯಲ್ಲಿ ಜತೆಗೂಡಿದ್ದಾರೆ. ಮಠ ಕಟ್ಟುವುದರಿಂದ ಇತಿಹಾಸದಲ್ಲಿ ಉಳಿಯುವುದಿಲ್ಲ. ಜನರ ಜತೆ ಪ್ರೀತಿಯಿಂದ ಬೆರೆತರೆ ಇತಿಹಾಸದಲ್ಲಿ ಉಳಿಯಬಹುದು ಎಂದು ಹೇಳಿದರು.

ಜೋಳಿಗೆ ಹಿಡಿದು ಬರುವೆ: ‘ಈವರೆಗೂ ಮಠ ಕಟ್ಟಲು ಸಾಧ್ಯವಾಗಿಲ್ಲ. ಮೀಸಲಾತಿ ಹೋರಾಟ ಮುಗಿಸಿ ಜುಲೈ 23ರಿಂದ ಅಕ್ಟೋಬರ್‌ 23ರವರೆಗೆ ಪಂಚಮಸಾಲಿ ಸಮುದಾಯದ ಜನರಿರುವ 12,000 ಹಳ್ಳಿಗಳಿಗೂ ಜೋಳಿಗೆ ಹಿಡಿದು ಬರುವೆ. ನಿಮ್ಮ ನೆರವಿನಲ್ಲಿ ಮಠ ಕಟ್ಟುತ್ತೇನೆ’ ಎಂದು ಸ್ವಾಮೀಜಿ ಪ್ರಕಟಿಸಿದರು.


Spread the love

About Laxminews 24x7

Check Also

ಬೆಳಗಾವಿ: ಕೈಲಾಸಕ್ಕೆ ಕರೆದೊಯ್ಯುವ ನಂಬಿಕೆ, ದೇಹತ್ಯಾಗಕ್ಕೆ ಮುಂದಾದ ಕುಟುಂಬ; ಅಧಿಕಾರಿಗಳಿಂದ ತಡೆ

Spread the loveಚಿಕ್ಕೋಡಿ (ಬೆಳಗಾವಿ): ಇಂದಿನ ಆಧುನಿಕ ದಿನಗಳಲ್ಲೂ ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ