ಮುಂಬೈ, ಫೆಬ್ರುವರಿ 16: ಮುಂಬೈನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಬೈನ ಕೆಲವು ಪ್ರದೇಶಗಳಲ್ಲಿ ಮತ್ತೆ ಲಾಕ್ ಡೌನ್ ವಿಧಿಸುವ ಕುರಿತು ಚರ್ಚೆ ನಡೆದಿದೆ.
ಕೊರೊನಾ ಸೋಂಕಿನ ಪ್ರಕರಣಗಳು ಹೀಗೇ ಹೆಚ್ಚುತ್ತಿದ್ದರೆ, ರಾಜ್ಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಎರಡು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಬೃಹತ್ ಮುಂಬೈ ಮುನಿಸಿಪಾಲ್ ಕಾರ್ಪೊರೇಷನ್ ಮೇಯರ್ ಕಿಶೋರಿ ಪೆಡ್ನೇಕರ್, “ಜನರು ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದರೆ ಮತ್ತೆ ಲಾಕ್ ಡೌನ್ ವಿಧಿಸಬೇಕಾಗುವುದು” ಎಂದು ಹೇಳಿದ್ದಾರೆ.
“ರೈಲುಗಳಲ್ಲಿ ಪ್ರಯಾಣಿಸುವ ಎಷ್ಟೋ ಮಂದಿ ಮಾಸ್ಕ್ ಹಾಕಿಕೊಳ್ಳುವುದೇ ಇಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ. ಕೊರೊನಾ ಸೋಂಕಿನ ನಿರ್ವಹಣೆ ಸರ್ಕಾರಕ್ಕೆ ಕಾಳಜಿಯ ವಿಷಯವಾಗಿದೆ. ಜನರು ಎಚ್ಚರಿಕೆಯಿಂದಿರಲೇಬೇಕು. ಇಲ್ಲವೆಂದರೆ ಮತ್ತೊಂದು ಲಾಕ್ ಡೌನ್ ವಿಧಿಸುವುದು ಅನಿವಾರ್ಯವಾಗಲಿದೆ” ಎಂದು ಹೇಳಿದ್ದಾರೆ.
ಲಾಕ್ ಡೌನ್ ಮತ್ತೆ ವಿಧಿಸಬೇಕೋ ಬೇಡವೋ ಎಂಬುದು ಜನರ ಕೈಯಲ್ಲಿದೆ ಎಂದು ಪುನರುಚ್ಚರಿಸಿದ್ದಾರೆ. ಈ ನಡುವೆ ಮುಂಬೈನಲ್ಲಿ ಚೆಂಬುರ್‌ನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಈ ಪ್ರದೇಶದಲ್ಲಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ನಿವಾಸಿಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಫೆಬ್ರುವರಿ 14ರಂದು ಮುಂಬೈನಲ್ಲಿ 600 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಸೋಮವಾರ, ಫೆಬ್ರುವರಿ 15ರಂದು 493 ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿದ್ದವು. ರಾಜ್ಯದಲ್ಲಿ ದಿನನತ್ಯ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇನ್ನು ಒಂದು ವಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ
Laxmi News 24×7