ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮೀಸಲಾತಿ ಬೇಡಿಕೆ ಹೋರಾಟಗಳು ಭವಿಷ್ಯದಲ್ಲಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ದಾರಿಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.
ಮೀಸಲಾತಿಯ ವಾಸ್ತವಾಂಶ ಅಧಿಕಾರದಲ್ಲಿ ಇರುವ ಸರ್ಕಾರಕ್ಕೇ ಅರ್ಥವಾಗಿಲ್ಲ. ಅಂಬೇಡ್ಕರ್ ತಲತಲಾಂತದಿಂದ ಅಪಮಾನ, ತುಳಿತಕ್ಕೆ ಒಳಗಾದವರಿಗೆ, ಅವರು ಸಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವಾಗಲು ಮೀಸಲಾತಿ ಬೇಕೆಂದರು. ಇಂದು ಸರ್ಕಾರದ ಸಚಿವರು, ಶಾಸಕರೇ ತಮ್ಮ ಜಾತಿಗಳ ಪರ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಸಂಪುಟ ಸಭೆಯಲ್ಲೇ ನಿರ್ಧರಿಸಬಹುದಾದ ವಿಷಯವನ್ನು ಬೀದಿಗೆ ತಂದು, ಮುಗ್ಧ ಸ್ವಾಮೀಜಿಗಳನ್ನೂ ಬಿಸಿಲಲ್ಲಿ ನೂರಾರು ಕಿ.ಮೀ ನಡೆಸುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗೊಂದಲದ ಹೇಳಿಕೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ವಿಷಯಗಳ ಕುರಿತು ಸದನದಲ್ಲೂ ಗಂಭೀರ ಚರ್ಚೆಯಾಗುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಸದನವೂ ಲೆಕ್ಕಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಕುಟುಂಬ ಸರ್ಕಾರ:
ಬಿಜೆಪಿ ಕೇಂದ್ರ ನಾಯಕರೊಬ್ಬರು ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಅದು ಯಡಿಯೂರಪ್ಪ ಕುಟುಂಬದ ಸರ್ಕಾರ ಎಂದು ಟೀಕಿಸಿದ್ದಾರೆ. ಅದು ನಿಜವೆಂದು ಭಾಸವಾಗುತ್ತಿದೆ. ಮುಖ್ಯಮಂತ್ರಿ ಜನರ ಮಧ್ಯೆ ಇಲ್ಲ. ಹಾವು, ಚೇಳುಗಳ ಮಧ್ಯೆ ಇದ್ದಾರೆ ಎನ್ನುವುದನ್ನು ವಿಜಯೇಂದ್ರ ಅವರೇ ಒಪ್ಪಿಕೊಂಡಿದ್ದಾರೆ. 2018ರಲ್ಲಿ ನಡೆದ ಅತಿವೃಷ್ಟಿಯ ಪರಿಹಾರ ಇನ್ನೂ ದೊರೆತಿಲ್ಲ. ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ತಲುಪಿಲ್ಲ. ಬಜೆಟ್‌ನಲ್ಲಿ ಘೋಷಣೆಯಾದ ಹಣ ಎಲ್ಲಿ ಹೋಯಿತು ಎನ್ನುವ ಲೆಕ್ಕವೇ ಇಲ್ಲ. ರಾಜ್ಯದ ಸಂಪತ್ತು ಕಾನೂನು ಬಾಹಿರವಾಗಿ ದುರ್ಬಳಕೆಯಾಗುತ್ತಿದೆ. ಗುಣತ್ಮಾಕ ಕೆಲಸಗಳಿಗೆ ಬಳಕೆಯಾಗುತ್ತಿಲ್ಲ. ಈಗ ಐದು ಎಕರೆಗೂ ಹೆಚ್ಚು ಭೂಮಿ ಇರುವ ರೈತರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆಹಾರ ಸಚಿವರು ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
Laxmi News 24×7