ಬರೂಚ್: ಗುಜರಾತ್‌ನ ಬರೂಚ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಒಟ್ಟು 31 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿಸಿನ್ಹಾ ಅಟೊದಾರಿಯಾ ಅವರ ಪ್ರಕಾರ, ಪಕ್ಷ ಇಷ್ಟು ಸಂಖ್ಯೆಯಲ್ಲಿ ಮುಸಲ್ಮಾನರನ್ನು ಚುನಾವಣೆಗೆ ಕಣಕ್ಕಿಳಿಸಿರುವುದು ಇದೇ ಮೊದಲು.
ಆದರೆ, ಮುಸಲ್ಮಾನರನ್ನು ಕಣಕ್ಕಿಳಿಸಿರುವುದಕ್ಕೂ, ವಿರೋಧಿ ಪಾಳಯದಲ್ಲಿ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಬಿ) ಮತ್ತು ಅಸಾಸುದ್ದೀನ್ ಒವೈಸಿ ಅವರ ಪಕ್ಷದ ಜೊತೆಗಿನ ಮೈತ್ರಿಗೂ ಸಂಬಂಧವಿಲ್ಲ ಎಂದರು.
ಬರೂಚ್ ಜಿಲ್ಲೆಯಲ್ಲಿ ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ 9 ತಾಲ್ಲೂಕು ಪಂಚಾಯಿತಿಗಳು ಮತ್ತು ನಾಲ್ಕು ಪುರಸಭೆಗಳಿಗೆ ಚುನಾವಣೆ ನಡೆಯುತ್ತಿದೆ.
ಬಿಜೆಪಿ ಒಟ್ಟು 320 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಇವರಲ್ಲಿ 31 ಮಂದಿ ಮುಸಲ್ಮಾನರು. ಇದು, ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಅಟೊದಾರಿಯಾ ಹೇಳಿದರು.