ಹೈದರಾಬಾದ್: ಬಹುದಿನಗಳ ಬಳಿಕ ಕೆಲ ದಿನಗಳ ಹಿಂದೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಕಲಾವಿದರಿಗೆ ಹೊಸ ಹುರುಪು ಬಂದಿದ್ದು, ಹಲವರು ತಮ್ಮ ಕಾಯಕದತ್ತ ಮರಳುತ್ತಿದ್ದಾರೆ. ಅಲ್ಲದೆ ಸುಧೀರ್ಘ ರಜೆ ಬಳಿಕ ಕೆಲಸಕ್ಕೆ ಹೋಗುತ್ತಿರುವ ಅನುಭವ ಸೆಲೆಬ್ರೆಟಿಗಳಿಗೆ ಆಗುತ್ತಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಸಹ ಸುಧೀರ್ಘ ಸಮಯದ ಬಳಿಕ ಶೂಟಿಂಗ್‍ಗೆ ಮರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ತುಂಬಾ ದಿನಗಳ ಕಾಲ ಎಲ್ಲ ಸೆಲೆಬ್ರೆಟಿಗಳು ಚಿತ್ರೀಕರಣದಿಂದ ದೂರ ಉಳಿದಿದ್ದರು. ಇದೇ ಸಮಯದಲ್ಲಿ ಹಲವರು ಕುಟುಂಬದೊಂದಿಗೆ ಕಾಲ ಕಳೆದರೆ, ಇನ್ನೂ ಕೆಲವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದರು. ಉಳಿದ ಸಮಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಮೀಸಲಿರಿಸಿದ್ದರು. ಆದರೆ ಇತ್ತೀಚೆಗೆ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿವೆ. ಆದರೂ ಇಷ್ಟು ದಿನ ನಟ, ನಟಿಯರು ಚಿತ್ರೀಕರಣಕ್ಕೆ ಹೋಗಿರಲಿಲ್ಲ. ಇದೀಗ ಶೂಟಿಂಗ್‍ನಲ್ಲಿ ಭಾಗವಹಿಸಲು ಮುಂದಾಗಿದ್ದು, ಕಿಚ್ಚ ಸುದೀಪ್ ಫ್ಯಾಂಟಮ್ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಇದೇ ವೇಳೆ ಚಿತ್ರೀಕರಣಕ್ಕೆ ಮರಳಿದ ಅನುಭವವನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದು, ಶೂಟಿಂಗ್‍ನ ಆರಂಭವಾಗಿರುವ ಕುರಿತು ಚಿತ್ರೀಕರಣದ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ಇಂದು ಮೇಕಪ್ ಹಾಕಿಕೊಂಡಾಗ ಅದ್ಭುತ ಅನುಭವವಾಯಿತು. ನನ್ನ ಉತ್ಸಾಹದಿಂದ ವಿಸ್ತøತ ರಜಾದಿನಗಳಲ್ಲಿದ್ದೆ ಎಂದು ಭಾಸವಾಯಿತು. ಸಿನಿಮಾ ಎಂಬ ಉತ್ಸಾಹ. ಹೀಗಾಗಿ ನಾನು ಇಲ್ಲಿದ್ದೇನೆ. ಮತ್ತೆ ವಿಕ್ರಾಂತ್ ರೋಣ ಘರ್ಜಿಸಲಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್‍ನೊಂದಿಗೆ ಫ್ಯಾಂಟಮ್ ಬಿಗಿನ್ಸ್ ಎಂದು ಹಾಕಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭಕೋರುತ್ತಿದ್ದು, ಹಲವು ದಿನಗಳ ಬಳಿಕ ಅಣ್ಣ ಶೂಟಿಂಗ್‍ಗೆ ಮರಳಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ ವಾವ್ ಫೆಂಟಾಸ್ಟಿಕ್, ಯು ಲುಕ್ ಸ್ಟನ್ನಿಂಗ್ ಅಣ್ಣ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಶೂಟಿಂಗ್ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ಚಿತ್ರೀಕರಣದ ಕೆಲಸಕ್ಕೆ ಚಾಲನೆ ನೀಡಿತ್ತು. ಕೊರೊನಾ ಲಾಕ್‍ಡೌನ್ ಮುನ್ನವೇ ಚಿತ್ರತಂಡ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರಬೇಕಿತ್ತು. ಆದರೆ ಲಾಕ್‍ಡೌನ್ ಕಾರಣದಿಂದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು.