ಬೆಂಗಳೂರು,ಫೆ.10- ಈ ಬಾರಿ ಕೋವಿಡ್-19 ಬಂದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗದಿರುವ ಕಾರಣ ಈ ಬಾರಿಯ ಬಜೆಟ್‍ನಲ್ಲಿ ತೆರಿಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ. ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು ಈಗಾಗಲೇ ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದಾರೆ.
ಕಳೆದ ವರ್ಷ ಸರ್ಕಾರ ಇಟ್ಟುಕೊಂಡಿದ್ದ ತೆರಿಗೆ ಸಂಗ್ರಹಣೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ತೆರಿಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಮುಖ್ಯವಾಗಿ ಮದ್ಯ, ಸಿಗರೇಟು, ಕಬ್ಬಿಣ, ಸಿಮೆಂಟ್, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸೇರಿದಂತೆ ಬೊಕ್ಕಸಕ್ಕೆ ಆದಾಯ ತರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಬೇಕೆಂಬ ಪ್ರಸ್ತಾಪ ವ್ಯಕ್ತವಾಗಿದೆ.