ಖಾನಾಪುರ – : ಖಾನಾಪುರ ತಾಲೂಕು ಇಲ್ಲಿಯವರೆಗೆ ಕೊರೋನಾ ರಹಿತವಾಗಿ ಗುರುತಿಸಿಕೊಂಡಿತ್ತು. ತಾಲೂಕಿನಲ್ಲಿ ಕೋವಿಡ್-೧೯ ಗೆ ಮೊದಲ ಬಲಿಯಾಗಿದೆ. ಪಟ್ಟಣದ ರೇಣುಕಾ ಹೊಟೇಲ್ ಉದ್ಯಮಿ ೩ ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಹೊಟೆಲನ್ನು ಸೀಲಡೌನ್ ಮಾಡಲಾಗಿದೆ.
ಶಾಸಕಿ ಡಾ.ಅಂಜಲಿ ನಿಂಬಾಳಕರ, ತಹಶೀಲದಾರ ರೇಷ್ಮಾ ತಾಳಿಕೋಟೆ, ಪಂ.ಪ.ಮುಖ್ಯಾಧಿಕಾರಿ ವಿವೇಕ ಬನ್ನೆ, ಪೋಲಿಸ್ ಅಧಿಕಾರಿಗಳು, ಡಾ.ನಾಂದ್ರೆ , ಸರ್ವ ಪಕ್ಷಗಳ ಮುಖಂಡರು ಸೇರಿ ಹೊಟೇಲ್ ಗಳಲ್ಲಿ ಕೇವಲ ಪಾರ್ಸಲ್ ಗಳನ್ನು ಮಾತ್ರ ವಿತರಿಸಬೇಕು ಮತ್ತು ಪಟ್ಟಣದ ಹಿರಿಯರು ಸೇರಿ ನಿತ್ಯ ಮಧ್ಯಾಹ್ನ ೨ ಗಂಟೆ ನಂತರ ೧೫ ದಿನಗಳ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ರೇಣುಕಾ ಹೊಟೇಲ್ ನಲ್ಲಿ, ಚಹಾ, ಉಪಹಾರ, ತಿಂಡಿ ತಿನಿಸು ತಿಂದಿರುವ ವ್ಯಕ್ತಿಗಳು ಸ್ವ-ಇಚ್ಚೆಯಿಂದ ಮುಂದೆ ಬಂದು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಮುಂಜಾನೆ ೭ ಗಂಟೆಯಿಂದ ಮಧ್ಯಾಹ್ನ ೨ ಗಂಟೆ ವರೆಗೆ ಮಾತ್ರ ಅವಶ್ಯಕ ವಸ್ತುಗಳನ್ನು ಖರೀದಿಸಲು ಜನರಿಗೆ ಅವಕಾಶ ಇದೆ, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಅವಶ್ಯ ಇದ್ದರೆ ಮಾತ್ರ ಮನೆಯಿಂದ ಹೊರ ಬರಬೇಕು, ವೃದ್ಧರು, ಚಿಕ್ಕ ಮಕ್ಕಳು ಮನೆಯಲ್ಲಿರುವಂತೆ ಎಚ್ಚರ ವಹಿಸಬೇಕು ಹಾಗೂ ರೈತರು ಮುಂಜಾಗೃತೆ ವಹಿಸಿ ಕೃಷಿ ಕೆಲಸಗಳಿಗೆ ಹೋಗಬಹುದು, ಬರುವ ಗಣೇಶೋತ್ಸವವನ್ನು ಆಚರಿಸದೇ ಇರುವುದು ಒಳ್ಳೆಯದು. ಮತ್ತು ಜನರೇ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ವ ಅಧಿಕಾರಿಗಳು, ಪಟ್ಟಣದ ನಾಗರಿಕರು, ವ್ಯಾಪಾರಸ್ಥರು, ಉದ್ಯಮಿಗಳು ಉಪಸ್ಥಿತರಿದ್ದರು.