ನವದೆಹಲಿ: ತೀವ್ರಗೊಂಡ ರೈತರ ಪ್ರತಿಭಟನೆಯನ್ನು ತಡೆಯಲು ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕೃಷಿ ಕಾನೂನು ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬ್ಯಾರಿಕೇಡ್‍ಗಳನ್ನು ಉಲ್ಲಂಘಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಅಶ್ರುವಾಯು ಹಾರಿಸಲಾಗಿದೆ. ಉತ್ತರ ದೆಹಲಿಯಲ್ಲಿ ಅನ್ನದಾತರ ಕಿಚ್ಚು ತೀವ್ರಗೊಂಡಿಗೆ. ಕಲ್ಲು ತೂರಾಟವಾಗುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧವಾಗಿ ರೈತರು ತಿರುಗಿ ಬಿದ್ದಿದ್ದಾರೆ.
ರೈತರ ಗುಂಪು ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೇ ಬ್ಯಾರಿಕೇಡ್ ಕಿತ್ತೆಸೆದು ಔಟರ್ ರಿಂಗ್ ರೋಡ್ ಮೂಲಕ ಮುನ್ನುಗ್ಗಲು ಯತ್ನಿಸಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ. ಟ್ರ್ಯಾಕ್ಟರ್ ರಾಲಿ ಸಂದರ್ಭದಲ್ಲಿ ಟಿಖ್ರಿ ಗಡಿ ಪ್ರದೇಶದಲ್ಲಿ ರೈತರು ಆಡಳಿತಾರೂಢ ಬಿಜೆಪಿಯ ಪೋಸ್ಟರ್ ಅನ್ನು ಹರಿದು ಹಾಕಿರುವುದಾಗಿ ವರದಿ ತಿಳಿಸಿದೆ.
ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್ ಪೋರ್ಟ್ ನಗರದತ್ತ ಟ್ರ್ಯಾಕ್ಟರ್ ರಾಲಿ ಮೂಲಕ ರೈತರು ಒಳಪ್ರವೇಶಿಸಿದಾಗ ಪೊಲೀಸರು ತಡೆದಾಗ ಘರ್ಷಣೆ ನಡೆದಿದ್ದು, ಈ ವೇಳೆ ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ.