ಮುಂಬೈ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ದಿನಬೆಳಗಾದರೆ ಸಾಕು ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಬಾಲಿವುಡ್ ನಟ ಸೋನು ಸೂದ್ ಕೂಡ ಲಾಕ್‍ಡೌನ್ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದ ನಟ ಇದೀಗ ಮಹಾರಾಷ್ಟ್ರ ಪೊಲೀಸರ ಸಹಾಯಕ್ಕೆ ನಿಂತಿದ್ದಾರೆ.
ಹೌದು. ಮಹಾರಾಷ್ಟ್ರ ಪೊಲೀಸರಿಗೆ ಸುಮಾರು 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಸೋನು ಸೂದ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಅವರು ಟ್ವೀಟ್ ಮಾಡಿದ್ದು, ನಮ್ಮ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡಿದ ನಟ ಸೊನು ಸೂದ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.