ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಕಾಣುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಪೊಗರು ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಬಾಡಿ ಟ್ರಾನ್ಸ್‌ಫರ್‌ಮೇಶನ್‌ಗೆ ಹೆಚ್ಚು ಒತ್ತು ನೀಡಿದ್ದು, ಹಾಗಾಗಿ, ಸಿನಿಮಾ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ 10ನೇ ತರಗತಿಯ ವಿದ್ಯಾರ್ಥಿಯಾಗಿ ನಟಿಸಿದ್ದು, ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ಆಮೇಲೆ ಮತ್ತೆ 60 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಊಟ, ನಿದ್ದೆ ಎಲ್ಲ ಬಿಟ್ಟು ಕೆಲಸ ಮಾಡಿದ್ದಾರೆ.
ನಂದ ಕಿಶೋರ್ ನಿರ್ದೇಶಿಸಿರುವ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ನಾಯಕರಾಗಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಜಗಪತಿ ಬಾಬು, ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ಹಾಗೂ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಚಂದನ್ ಶೆಟ್ಟಿಯ ಮ್ಯೂಸಿಕ್ ಸೂಪರ್ ಎನಿಸಿಕೊಂಡಿದೆ.