ಮುಂಬೈ: ಅಂತರ್ ರಾಜ್ಯ ಕಾರ್ ಲೋನ್ ವಂಚನೆ ಜಾಲವನ್ನು ಮುಂಬೈ ಕ್ರೈ ಬ್ರ್ಯಾಂಚ್ ಬೇಧಿಸಿದ್ದು, 19 ಲಕ್ಷುರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಬ್ಯಾಂಕ್ ಒಂದರ ಮಾಜಿ ಲೋನ್ ಎಕ್ಸಿಕ್ಯೂಟಿವ್ ಕೂಡ ಸೇರಿದ್ದಾನೆ. ಆರೋಪಿಗಳು ಈ ಕಾರುಗಳನ್ನು ಮುಂಬೈ ಅಲ್ಲದೆ ಬೆಂಗಳೂರು, ಅಹ್ಮದಾಬಾದ್‌ನಲ್ಲಿ ಅಡ ಇಟ್ಟಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಮರ್ಸಿಡಿಸ್ ಬೆನ್ l, ಆಡಿ, ಟೊಯೊಟಾ ಇನ್ನೋವಾ, ಫಾರ್ಚೂನರ್, ಫೋರ್ಡ್, ಮಿನಿಕೂಪರ್‌ನಂಥ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
“ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆರೋಪಿಗಳು ಲಕ್ಷುರಿ ಕಾರು ಖರೀದಿಸುತ್ತಿದ್ದರು. ಅವುಗಳನ್ನು ಮುಂಬೈ, ಅಲ್ಲದೆ ಹೊರ ರಾಜ್ಯಗಳ ಶ್ರೀಮಂತರಿಗೆ ಅಡ ಇಡುತ್ತಿದ್ದರು. 20 ಲಕ್ಷ ಕಾರನ್ನು ನೀಡಿ, 15 ಲಕ್ಷ ರೂ. ಸಾಲ ಪಡೆಯುತ್ತಿದ್ದರು. ಹಣ ಅಡ್ಜೆಸ್ಟ್ ಆದಮೇಲೆ ಸಾಲ ತೀರಿಸಿ, ಕಾರು ವಾಪಸು ಪಡೆಯುವುದಾಗಿ ಹೇಳಿ ವಂಚಿಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಆರೋಪಿಗಳಾದ ಪ್ರದೀಪ್ ಮೌರ್ಯ (46), ಧರಮ್‌ಬೀರ್ ಶರ್ಮಾ (31), ಮೃಗೇಶ್ ನವಿಧರ್ (42), ಸಾಯಿನಾಥ್ ಗಾಂಜಿ (26), ದಿಲ್ಶಾದ್ ಅನ್ಸಾರಿ (44), ವಿಜಯ್ ವರ್ಮಾ (39), ಸಲ್ಮಾನ್ ಖಾನ್‌ನನ್ನು (42) ಬಂಧಿಸಿ, ಸಂಬಂಧಪಟ್ಟ ಪ್ರಕರಣ ದಾಖಲಿಸಲಾಗಿದೆ.