ನವದೆಹಲಿ,ಜ.18- ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೆ, ಬೇಡವೇ ಎಂಬ ಕುರಿತಂತೆ ದೆಹಲಿ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು. ಇದರಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ಕಳೆದ 53 ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಜ.26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಸುಮಾರು ಒಂದೂವರೆ ಲಕ್ಷ ಜನ ಸಮಾವೇಶಗೊಂಡು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.
ಈ ರ‍್ಯಾಲಿಗೆ ತಡೆ ನೀಡಬೇಕೆಂದು ದೆಹಲಿ ಪೊಲೀಸರ ಮುಖಾಂತರ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್, ವಿನೀತ್ ಶರಣ್ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಟ್ರ್ಯಾಕ್ಟರ್ ರ್ಯಾಲಿಗೆ ತಡೆನೀಡಲು ನಿರಾಕರಿಸಿದೆ.
ದೆಹಲಿಗೆ ಯಾರು ಬರಬೇಕು, ಎಲ್ಲಿಯವರೆಗೆ ಬರಬೇಕು, ಎಷ್ಟು ಮಂದಿ ಬರಬೇಕು ಎಂಬೆಲ್ಲಾ ವಿಷಯಗಳನ್ನು ನಿರ್ಧರಿಸುವುದು ಪೊಲೀಸರ ಕೆಲಸ. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ
Laxmi News 24×7