ರಾಯಚೂರು: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದ್ದು, ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯ ಮಾಡಿದ್ದಾರೆ.
ಸಿಂಧನೂರಿನ ಶ್ರೀಕೃಷ್ಣದೇವರಾಯ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯಿಂದಾಗಿ ಈ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದ 1,2,3ನೇ ಕೊಠಡಿಯ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದ್ದು, ಹಳೆಯ ಪಠ್ಯ ಕ್ರಮದ ಪ್ರಶ್ನೆ ಪತ್ರಿಕೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಬಿದ್ದಿದ್ದರು. ಪರೀಕ್ಷೆ ಆರಂಭವಾಗಿ ಅರ್ಧಗಂಟೆ ಬಳಿಕ ಪ್ರಶ್ನೆ ಪತ್ರಿಕೆ ಬದಲಿಸುವಂತೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. ಆದರೂ ಪ್ರಶ್ನೆ ಪತ್ರಿಕೆ ಬದಲಿಸಿಲ್ಲ. ಹೀಗಾಗಿ ಅದೇ ಪ್ರಶ್ನೆ ಪತ್ರಿಕೆಗೆ ವಿದ್ಯಾರ್ಥಿಗಳು ಉತ್ತರ ಬರೆದಿದ್ದಾರೆ.
ಪರೀಕ್ಷೆ ಬರೆದ 25 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಿಬ್ಬಂದಿ ಆಟವಾಡಿದ್ದಾರೆ. ಗಣಿತ ವಿಷಯದ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ ಪಠ್ಯ ಕ್ರಮದಲ್ಲಿ ಬದಲಾವಣೆಯಾಗಿಲ್ಲ ಮರುಪರೀಕ್ಷೆ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.