ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜ.13) ನಡೆದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ರಾಷ್ಟ್ರೀಯ ಹಬ್ಬವಾಗಿರುವುದರಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಪರೇಡ್ ಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಪೂರ್ವಾಭ್ಯಾಸ ನಡೆಸಬೇಕು. ಈ ಬಾರಿ ಶಾಲಾ ಮಕ್ಕಳಿಂದ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪರೇಡ್ ಕೂಡ ನಡೆಯುವುದಿಲ್ಲ ಎಂದರು.
ಸಮಾರಂಭದ ವೇದಿಕೆಯ ಸಿದ್ಧತೆ, ಆಸನ, ಧ್ವನಿವರ್ಧಕ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯವನ್ನು ಒದಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ಉಪ ಸಮಿತಿಗಳು ಸಭೆ ನಡೆಸಿ ಎಲ್ಲ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಎಲ್ಲ ದೇವಾಲಯ, ಮಸೀದಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ನಗರದ ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರಿ ಕಚೇರಿಗಳಿಗೂ ಕೂಡ ದೀಪಾಲಂಕಾರ ಮಾಡಬೇಕು. ಅದೇ ರೀತಿ ಸಾರ್ವಜನಿಕರು ಕೂಡ ತಮ್ಮ ಮನೆ, ಅಂಗಡಿ-ಮುಂಗಟ್ಟುಗಳನ್ನು ಕೂಡ ಅಲಂಕಾರ ಮಾಡಬೇಕು ಎಂದು ತಿಳಿಸಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿಹಿ ಹಂಚಲು ಆಸಕ್ತರಾಗಿರುವ ಸಂಘ-ಸಂಸ್ಥೆಗಳು ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಂಡು ಸಿಹಿ ವಿತರಿಸಬಹುದು.
Laxmi News 24×7