ಡಾ.ರಾಜ್‌ಕುಮಾರ್ ಕುಟುಂಬದವರನ್ನು ಸುಮ್ಮನೆ ‘ದೊಡ್ಮನೆಯರು’ ಎನ್ನುವುದಿಲ್ಲ. ಅವರ ವಿಶಾಲ ಮನೋಭಾವಕ್ಕೆ ಅನ್ವರ್ಥವಾಗಿ ಆ ಹೆಸರು ಬಂದಿದೆ.
ಶಿವಣ್ಣ, ಬೀದಿ ಬದಿಯಲ್ಲಿ ಚಹ ಕುಡಿದ, ಉಪ್ಪಿಟ್ಟು ತಿಂದ, ಅಭಿಮಾನಿಗಳಿಗೆ ಸಹಾಯ ಮಾಡಿದ ಸುದ್ದಿಗಳು, ಚಿತ್ರಗಳು ನೋಡಿಯೇ ಇರುತ್ತೀರಾ. ಪುನೀತ್ ರಾಜ್‌ಕುಮಾರ್ ಸಹ ಸರಳತೆಯಲ್ಲಿ ಅಣ್ಣನಂತೆಯೇ.
ಇತ್ತೀಚೆಗಷ್ಟೆ ತಮ್ಮ ಕಚೇರಿಯ ಉದ್ಯೋಗಿಯೊಬ್ಬರ ಮದುವೆಗಾಗಿ ಕರಾವಳಿಗೆ ಬಂದಿದ್ದ ಪುನೀತ್ ರಾಜ್‌ಕುಮಾರ್, ಇದೀಗ ಮತ್ತೊಮ್ಮೆ ತಮ್ಮ ವಿಶಾಲ ಹೃದಯಕ್ಕೆ, ಮನುಷ್ಯ ಪ್ರೀತಿಗೆ ಉದಾಹರಣೆಯೊಂದನ್ನು ನೀಡಿದ್ದಾರೆ.
ಅಭಿಮಾನಿಯೊಬ್ಬ ತಮ್ಮ ತಂಗಿಯ ಮದುವೆಗೆ ಪುನೀತ್ ಅವರನ್ನು ಆಹ್ವಾನಿಸಿದ್ದರು. ಆದರೆ ಕೊರೊನಾ ಕಾಲ ಅದಕ್ಕಿಂತಲೂ ಹೆಚ್ಚಾಗಿ, ಪುನೀತ್ ಮದುವೆಗೆ ಬಂದರೆ ಜನಜಾತ್ರೆಯೇ ನೆರೆದು, ಮದುವೆಗೆ ಬಂದವರು ಸಮಸ್ಯೆಗೆ ಸಿಕ್ಕಿಹಾಕಿಕೊಂಡು ಬಿಡುತ್ತಾರೆ.
ಹಾಗಾಗಿ ನವ ಜೋಡಿಗೆ ವಿಡಿಯೋ ಕಾಲ್ ಮಾಡಿ ಮದುವೆಗೆ ಶುಭಾಶಯ ಕೋರಿದ್ದಾರೆ ಪುನೀತ್ ರಾಜ್‌ಕುಮಾರ್. ಪುನೀತ್ ಅವರು ನವವಿವಾಹಿತ ಜೋಡಿಗೆ ವಿಡಿಯೋ ಕಾಲ್ ಮೂಲಕ ಮದುವೆ ಶುಭಾಶಯ ಕೋರಿದ ಚಿತ್ರ ಸಖತ್ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದಷ್ಟೆ ತಮ್ಮ ಕಚೇರಿಯ ಉದ್ಯೋಗಿಯೊಬ್ಬನ ಮದುವೆಯಲ್ಲಿ ಪಾಲ್ಗೊಳ್ಳಲು ಕುಮುಟಾಕ್ಕೆ ಬಂದಿದ್ದರು ಪುನೀತ್ ರಾಜ್‌ಕುಮಾರ್. ಪುನೀತ್ ಬಂದ ವಿಷಯ ಗೊತ್ತಾಗಿ ಮದುವೆ ಮನೆ ಮುಂದೆ ಜನಜಾತ್ರೆಯೇ ನೆರೆದಿತ್ತು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಮದುವೆಗೆ ಬಂದಿದ್ದ ಪುನೀತ್ ಗೋಕರ್ಣ ಬೀಚ್, ದೇವಾಲಯ ಇನ್ನಿತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.
ಪುನೀತ್ ಅವರ ಯುವರತ್ನ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಪುನೀತ್ ತೊಡಗಿಸಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.