ವಿಜಯಪುರ…ವಿಜಯಪುರ ನಗರದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’*
: ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದ ದರ್ಬಾರ್ ಮೈದಾನದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’ ನಡೆಯಲಿದೆ ಎಂದು ಪುಸ್ತಕ ಮೇಳದ ಆಯೋಜಕ, ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಇದು ಕೇವಲ ಪುಸ್ತಕ ಮೇಳವಾಗಿರದೇ ನಾಡಿನ ಹೆಸರಾಂತ ಲೇಖಕರೊಂದಿಗೆ ಸಂವಾದ, ವಿದ್ಯಾರ್ಥಿಗಳ ಮಾತು, ಕವಿಗೋಷ್ಠಿ, ಪತ್ರಕರ್ತರ ಅನುಭವದ ನುಡಿಗಳು ಇರಲಿದೆ. ಅಲ್ಲದೇ, ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ’ ಎಂದರು. ‘ಈ ಪುಸ್ತಕ ಮೇಳದಲ್ಲಿ ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಪುಸ್ತಕ ಪ್ರಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಿರ್ದಿಷ್ಟ ತಾತ್ವಿಕ ವಿಚಾರದ ನೆಲೆಯೊಳಗೆ ಆಯೋಜಿಸಲಾಗುತ್ತಿರುವ ಈ ಪುಸ್ತಕ ಮೇಳದಲ್ಲಿ ಸುಮಾರು 50 ಮಳಿಗೆಗಳು ಇರಲಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಂಗಗಳು ಪುಸ್ತಕ ಮೇಳದಲ್ಲಿ ತಮ್ಮ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳು ಆಯೋಜಿಸುವ ಸಾಂಪ್ರದಾಯಕ ಪುಸ್ತಕ ಮೇಳಕ್ಕೂ ವಿಜಯಪುರದಲ್ಲಿ ಆಯೋಜಿಸುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳಕ್ಕೂ ಅಜಗಜಾಂತರ ವ್ಯತ್ಯಸ ಇರಲಿದೆ’ ಎಂದರು. ‘ಇದುವರೆಗೆ ಆಯೋಜನೆ ಆಗಿರುವ ಬಹುತೇಕ ಪುಸ್ತಕ ಮೇಳಗಳಲ್ಲಿ ಎಲ್ಲ ಬಗೆಯ ಲೇಖಕರ, ಎಲ್ಲ ವಿಷಯಗಳ, ಎಲ್ಲವನ್ನು ಒಳಗೊಂಡ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ನೀಡಲಾಗಿರುತ್ತದೆ. ಆದರೆ, ಈ ಪುಸ್ತಕ ಮೇಳದಲ್ಲಿ ಜೀವಪರವಾದ, ಮನುಷ್ಯ ಪರವಾದ, ಸೌಹಾರ್ದ ಮೂಡಿಸುವ, ಪ್ರಗತಿಪರವಾದ ಆಯ್ದ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ’ ಎಂದು ಹೇಳಿದರು. ರಿಯಾಯಿತಿ ದರದಲ್ಲಿ ಮಾರಾಟ: ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳುವ ಪ್ರಕಾಶಕರಿಂದ ಅಲ್ಪ ಮೊತ್ತದ ಶುಲ್ಕ ಸಂಗ್ರಹಿಸಲಾಗುವುದು, ಪ್ರಕಾಶಕರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು, ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾಟವಾಗಲಿದ್ದು, ಪುಸ್ತಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ, ತಮ್ಮ ನೆಚ್ಚಿನ ಪುಸ್ತಕ ಖರೀದಿ ಮಾಡಬೇಕು ಎಂದು ಪುಸ್ತಕ ಮೇಳದ ಸಂಘಟಕ ಅನಿಲ ಹೊಸಮನಿ ಮನವಿ ಮಾಡಿದರು.
Laxmi News 24×7