ಗಂದಿಗವಾಡ ಗ್ರಾ.ಪಂ ನವೀಕರಣ ಹಾಗೂ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಗಡಿನಾಡು ಸಿರಿ’ ಪ್ರಶಸ್ತಿ ಪ್ರದಾನ
• ಗಂದಿಗವಾಡ ಪಂಚಾಯತಿ ನವೀಕರಣದ ಸಂಭ್ರಮ
• ಪಿಡಿಒ ನದಾಫ್‌ಗೆ ಗಡಿನಾಡು ಸಿರಿ ಪ್ರಶಸ್ತಿ
• ಗ್ರಾಮ ಪಂಚಾಯತಿ ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆ
• ಗಂಧಿಗವಾಡ ಗ್ರಾಮದ ಪ್ರಗತಿಗೆ ಅಧಿಕಾರಿಗಳ ಬದ್ಧತೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮ ಪಂಚಾಯತಿಯಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿತ್ತು. ನವೀಕರಣಗೊಂಡ ಪಂಚಾಯತಿ ಕಾರ್ಯಾಲಯದ ಉದ್ಘಾಟನೆ, ಸದಸ್ಯರ ಬೀಳ್ಕೊಡುಗೆ ಹಾಗೂ ದಕ್ಷ ಅಧಿಕಾರಿಗೆ ಸನ್ಮಾನ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮ ಪಂಚಾಯತಿಯ ನವೀಕೃತ ಕಟ್ಟಡವನ್ನು ಪಂಚಾಯತಿ ಅಧ್ಯಕ್ಷರಾದ ದೇಸಾಯಿ ಗಾಳಿ ಅವರು ವಾಸ್ತು ಪೂಜೆಯೊಂದಿಗೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಳೆದ ಐದು ವರ್ಷಗಳ ಯಶಸ್ವಿ ಅವಧಿ ಪೂರ್ಣಗೊಳಿಸಿದ ಸದಸ್ಯರನ್ನು ಸತ್ಕರಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಗ್ರಾಮದ ಅಭಿವೃದ್ಧಿಯಲ್ಲಿ ಶ್ರಮಿಸಿದ ಸಮಾಜ ಸೇವಕರು, ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆದಾರರು ಹಾಗೂ ಸಿಬ್ಬಂದಿಯನ್ನು ಈ ವೇಳೆ ಗೌರವಿಸಲಾಯಿತು. ಗ್ರಾಮದ ಪ್ರಗತಿಯೇ ಗುರಿ ಎಂದು ಸಾರಿದ ಅಧ್ಯಕ್ಷ ದೇಸಾಯಿ ಗಾಳಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮದ ಅಭಿವೃದ್ಧಿಯಲ್ಲಿ ಮಹತ್ವದ ಬದಲಾವಣೆ ತಂದ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ’ ವತಿಯಿಂದ ‘ಗಡಿನಾಡು ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನದಾಫ್, “ಗ್ರಾಮದ ಪ್ರಗತಿಗೆ ಜನರ ಸಹಕಾರವೇ ಮೂಲಶಕ್ತಿ” ಎಂದು ತಿಳಿಸಿದರು.
ಸಮಾಜ ಸೇವಕ ಎಂ.ಎಂ. ರಾಜೀಬಾಯಿ ಮಾತನಾಡಿ, ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಚುರುಕುಗೊಳಿಸಿದ ಉಸ್ಮಾನ್ ನದಾಫ್ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಕ್ಷ್ಮಿ ಕಮತಗಿ, ಬಸವರಾಜ್ ಬಂಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Laxmi News 24×7