ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯು ಆಯೋಜಿಸಿದ್ದ ಮಕ್ಕಳ ವಾರದ ಸಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ವಿಶಿಷ್ಟ ಸಂತೆಯಲ್ಲಿ ಮಕ್ಕಳು ತರಕಾರಿ ಮತ್ತು ವಿವಿಧ ಖಾದ್ಯ ಪದಾರ್ಥಗಳ ಮಳಿಗೆಗಳನ್ನು ತೆರೆದಿದ್ದರು. ಪೋಷಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ, ಮಕ್ಕಳಿಂದ ತರಕಾರಿ ಖರೀದಿಸಿದರು ಮತ್ತು ಭೇಲ್, ಪಾನಿಪುರಿ, ವಡಾ ಪಾವ್, ಪೋಹಾ, ಪರಾಠಾ ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳನ್ನು ಸವಿದು ಆನಂದಿಸಿದರು. ತಮ್ಮಿಷ್ಟದ ಆಹಾರವನ್ನು ಖರೀದಿಸಿ ಮಕ್ಕಳಿಗೆ ಬೆಂಬಲ ನೀಡಿದರು.
ಈ ಸಂತೆ ಕೇವಲ ಮನರಂಜನೆಯಾಗಿರದೆ, ಉತ್ತಮ ವ್ಯಾಪಾರ ಮೇಳವಾಗಿಯೂ ಗಮನ ಸೆಳೆಯಿತು. ಒಟ್ಟು ಮೂವತ್ತೈದಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವ್ಯಾಪಾರ ನಡೆದು, ಮಕ್ಕಳಲ್ಲಿ ವಾಣಿಜ್ಯೋದ್ಯಮದ ಕೌಶಲ್ಯಗಳು ಅರಳಿದವು.
ಮಕ್ಕಳಲ್ಲಿ ವ್ಯವಹಾರ ಜ್ಞಾನ, ಕೌಶಲ್ಯಗಳನ್ನು ಬೆಳೆಸುವುದು, ಭವಿಷ್ಯದ ಜೀವನಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು ಹಾಗೂ ವಿಭಿನ್ನ ಅನುಭವದ ಮೂಲಕ ಉತ್ತಮ ಮೌಲ್ಯಗಳನ್ನು ಕಲಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿತ್ತು. ಶಾಲೆಯು ಇಂತಹ ಪ್ರಾಯೋಗಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದು, ಅವರಿಗೆ ಪತ್ಯೇತರ ಚಟುವಟಿಕೆಗಳ ಮೂಲಕ ಹೊಸ ಅನುಭವಗಳನ್ನು ನೀಡುತ್ತಿದೆ.
Laxmi News 24×7