Breaking News

ಕೋಗಿಲು ಬಳಿಯ ವಾಸಿಂ, ಫಕೀರ್​ ಕಾಲೋನಿಯಲ್ಲಿ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ

Spread the love

ಬೆಂಗಳೂರು : ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಕ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ‌300 ಮನೆಗಳನ್ನು ನೆಲಸಮ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ, ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಕೋಗಿಲು ಬಡಾವಣೆ ನಿವಾಸಿಗಳಾದ ಜೈಬ ತಬಸಂ, ರೆಹಾನಾ ಮತ್ತು ಆರೀಫ್ ಬೇಗಂ ಎಂಬುವರು ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ಪೊಲೀಸ್​ ಆಯುಕ್ತರು ಮತ್ತು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿಯು ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಾಗಿದೆ.

ಅರ್ಜಿಯಲ್ಲೇನಿದೆ? ವಾಸಿಂ ಹಾಗೂ ಫಕೀರ್ ಕಾಲೋನಿಯಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಕೆಡವುದಕ್ಕೂ ಮುನ್ನ ಯಾವುದೇ ನೋಟಿಸ್​ ಜಾರಿ ಮಾಡಿಲ್ಲ. ತಮ್ಮ ಅಹವಾಲುಗಳನ್ನು ಆಲಿಸಿಲ್ಲ. ಬಡಾವಣೆಯಲ್ಲಿ ನೆಲೆಸಿರುವವರು ಹಲವು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಬಹುತೇಕ ಜನರಲ್ಲಿ ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹೊಂದಿದ್ದಾರೆ.

ಪಾಲಿಕೆ ಅಧಿಕಾರಿಗಳು ಅಕ್ರಮ ಒತ್ತುವರಿ ಎಂಬ ಆರೋಪದಲ್ಲಿ ಮನೆಗಳನ್ನು ತೆರವು ಮಾಡುವುದಕ್ಕೂ ಮುನ್ನ ಶೋಕಾಸ್​ ನೋಟಿಸ್​ ಜಾರಿ ಮಾಡಿ, 15 ದಿನಗಳ ಕಾಲಾವಕಾಶ ನೀಡಬೇಕು. ಬುಲ್ಡೋಜರ್ ಬಳಕೆ ಮಾಡಿ ನೆಲಸಮಗೊಳಿಸಬಾರದು ಎಂಬುದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಜತೆಗೆ, ತೆರವು ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಲಿಖಿತ ನೋಟಿಸ್​ ಜಾರಿ ಮಾಡಿ, ಅವರನ್ನು ವಿಚಾರಣೆಗೊಳಪಡಿಸಲು ಸಮಯಾವಕಾಶ ನೀಡಬೇಕು ಎಂದು ಹೇಳಿದೆ.

ಆದರೆ, ಸರ್ಕಾರದ ಅಧಿಕಾರಿಗಳು ಸುಪ್ರೀಂಕೋರ್ಟ್​ನ ಈ ಆದೇಶಕ್ಕೆ ತದ್ವಿರುದ್ದವಾಗಿ ನಡೆದುಕೊಂಡು, ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಬಡಾವಣೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನೂರಾರು ವಿದ್ಯಾರ್ಥಿಗಳ ಸಮವಸ್ತ್ರ, ಪುಸ್ತಕಗಳು, ಹಾಲ್​ ಟಿಕೆಟ್​ಗಳು ನಾಶವಾಗಿವೆ. ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಫಕೀರ್​ ಮತ್ತು ವಾಸಿಂ ಕಾಲೋನಿಯ ಎಲ್ಲ ನಿರಾಶ್ರಿತರಿಗೆ ಅಲ್ಲಿಂದ 5 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಪುನರ್ವಸತಿ ಅಥವಾ ಪರ್ಯಾಯ ವಸತಿ ಒದಗಿಸಬೇಕು. ಅದಕ್ಕಾಗಿ ಸಮೀಕ್ಷೆ ನಡೆಸಬೇಕು. ಹಲವು ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿರುವ ಮನೆಗಳನ್ನು ಕೆಡವಿರುವುದರಿಂದ ಪರಿಹಾರವನ್ನು ಒದಗಿಸಬೇಕು. ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಕೋರಲಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ