ಬೆಳಗಾವಿ: ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ಇನ್ನೇನು ಆರು ದಿನ ಮಾತ್ರ ಬಾಕಿ ಉಳಿದಿವೆ. ಪ್ರತಿವರ್ಷದಂತೆ ರಾಜ್ಯ ಸರ್ಕಾರ ಪ್ರವಾಸಕ್ಕೆ ಬಂದಂತೆ ಬಂದು ಹೋಗಬಾರದು. ಕಾಟಾಚಾರದ ಅಧಿವೇಶನ ಅವಶ್ಯಕತೆ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚಿಸಿ, ಇದೇ ಅಧಿವೇಶನದಲ್ಲಿ ಅದನ್ನು ಅನುಷ್ಠಾನಕ್ಕೆ ತರುವ ನಿರ್ಣಯ ಕೈಗೊಳ್ಳಬೇಕು. ಜೊತೆಗೆ ಇಲ್ಲಿಯವರೆಗೆ ಕೈಗೊಂಡ ನಿರ್ಣಯಗಳ ವರದಿ ಮಂಡಿಸಬೇಕು ಎಂದು ಇಲ್ಲಿನ ಜನರು ಆಗ್ರಹಿಸುತ್ತಿದ್ದಾರೆ.
ಹೌದು, 2006ರಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪರಾಕಾಷ್ಠೆಗೆ ತಲುಪಿತ್ತು. ಇದಕ್ಕೆ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಇಲ್ಲಿನ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಜೀರಿಗೆ ಭವನದಲ್ಲಿ ಅಧಿವೇಶನ ನಡೆದಿತ್ತು. ಇದು ಇಲ್ಲಿನ ಜನರಿಗೆ ಹೊಸ ಭರವಸೆ ಮೂಡಿಸಿತ್ತು. ಇಡೀ ಸರ್ಕಾರವೇ ನಮ್ಮೂರಿಗೆ ಬಂದಿದೆ. ಹಲವು ದಶಕಗಳ ಬೇಡಿಕೆಗೆ ಮುಕ್ತಿ ಸಿಕ್ಕು, ದಕ್ಷಿಣ ಕರ್ನಾಟಕದಂತೆ ನಮ್ಮ ಉತ್ತರ ಕರ್ನಾಟಕವೂ ಪ್ರಗತಿ ಹೊಂದುತ್ತದೆ ಎಂಬ ವಿಶ್ವಾಸ ಬಂದಿತ್ತು. ಆದರೆ, 12 ಅಧಿವೇಶನಗಳನ್ನು ಇಲ್ಲಿ ನಡೆಸಿದರೂ ಅದು ಕೇವಲ ಭರವಸೆ ಆಗಿಯೇ ಉಳಿದಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ವಿಧಾನಸೌಧಕ್ಕೆ ಪರ್ಯಾಯವಾಗಿ ಬೆಳಗಾವಿಯಲ್ಲಿ ಸುಮಾರು ಐದುನೂರು ಕೋಟಿ ರೂ. ಖರ್ಚು ಮಾಡಿ ಸುವರ್ಣ ವಿಧಾನಸೌಧ ಕಟ್ಟಲಾಗಿದೆ. 2012ರ, ಅಕ್ಟೋಬರ್ 11ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅದನ್ನು ಲೋಕಾರ್ಪಣೆಗೊಳಿಸಿದರು. ಇಲ್ಲಿಯೇ ಡಿಸೆಂಬರ್ ತಿಂಗಳಲ್ಲಿ 10 ದಿನ ಪ್ರತಿವರ್ಷ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ. ಈಗ ನಡೆಯುತ್ತಿರುವುದು 13ನೇ ಅಧಿವೇಶನ. ಆದರೆ, ಎಲ್ಲಾ ಸರ್ಕಾರಗಳು ಇಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸಿ ಹೋಗುತ್ತವೆ ಎಂಬ ಆರೋಪ ಕೇಳಿ ಬಂದಿದೆ.
ಮಾಡಬೇಕು ಅಂತಾ ಅಧಿವೇಶನ ಮಾಡಬೇಡಿ:ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಇಲ್ಲಿನ ಸಮಸ್ಯೆಗಳಿಗೆ ಸರ್ಕಾರ ಧ್ವನಿ ಆಗುತ್ತದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಆಗಬಹುದು ಅಂತಾ ನಾವೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಅದು ಹುಸಿಯಾಗಿದೆ. ಇದೊಂದು ಪಿಕ್ನಿಕ್ ಸ್ಪಾಟ್ ಆಗಿಬಿಟ್ಟಿದೆ. ಅಲ್ಲದೇ ಉತ್ತರ ಕರ್ನಾಟಕ ಭಾಗದ ಶಾಸಕರ ಹಾಜರಾತಿಯೇ ಕಡಿಮೆ ಇರುತ್ತದೆ. ಹಾಗಾಗಿ, ಅಧಿವೇಶನ ಪ್ರತಿವರ್ಷ ಮಾಡಬೇಕು ಅಂತಾ ಮಾಡುತ್ತಾರೆ ಹೊರತು ಈ ಭಾಗಕ್ಕೆ ನ್ಯಾಯ ಕೊಡಿಸುವ ಬಗ್ಗೆ ಯಾವ ಸರ್ಕಾರವೂ ಚಿಂತನೆ ಮಾಡಿಲ್ಲ ಎಂದು ದೂರಿದರು.
ನಿಮ್ಮ ಜಗಳಕ್ಕೆ ಅಧಿವೇಶನ ಬಲಿ ಕೊಡಬೇಡಿ: ರಾಜ್ಯಮಟ್ಟದ ರಾಜಕೀಯ ಜಗಳ ಮತ್ತು ಸರ್ಕಾರದಲ್ಲಿನ ಭಿನ್ನಮತ ಕುರಿತು ಬೆಳಗಾವಿಯಲ್ಲಿ ಚರ್ಚೆ ಮಾಡುತ್ತಾರೆ. ಇದರಿಂದ ಸದನದಲ್ಲಿ ಅರ್ಥಪೂರ್ಣ ಚರ್ಚೆ ಆಗದೆ ವ್ಯರ್ಥ ಕಾಲಹರಣ ಸರಿಯಲ್ಲ. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರಿಗೆ ಊಟ, ಉಪಹಾರ, ವಸತಿ ಸೇರಿ ಎಲ್ಲ ವ್ಯವಸ್ಥೆ ಮಾಡಬೇಕಾಗುತ್ತದೆ. ಅಂದಾಜು 20 ಕೋಟಿಗೂ ಅಧಿಕ ಹಣ ಖರ್ಚಾಗುತ್ತದೆ. ಇದರಿಂದ ಈ ಭಾಗದ ಹೋಟೆಲ್, ಲಾಡ್ಜ್, ವಾಹನ ಮಾಲೀಕರಿಗೆ ಲಾಭ ಆಗಿದೆ ಹೊರತು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಆಗಿಲ್ಲ ಎನ್ನುತ್ತಾರೆ ಅಶೋಕ ಚಂದರಗಿ.
ರಾಜ್ಯ ಸರ್ಕಾರ ಆ್ಯಕ್ಷನ್ ಟೇಕನ್ ರಿಪೋರ್ಟ್ ಮಂಡಿಸಬೇಕು. ಇಷ್ಟು ಬಾರಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಇಂತಿಂಥ ವಿಷಯಗಳು ಚರ್ಚೆಯಾಗಿ, ಅನುಷ್ಠಾನಕ್ಕೆ ತರಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಆ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಬೇಕು ಎಂದು ಒತ್ತಾಯಿಸಿದರು.
ಯಾರಿಗೆ ಲಾಭ?: ಚಳಿಗಾಲ ಅಧಿವೇಶನದಿಂದ ಬೆಳಗಾವಿಯಲ್ಲಿ ಜನಸಾಮಾನ್ಯರಿಗೆ ಟ್ರಾಫಿಕ್ ಕಿರಿಕಿರಿ, ಸಾಮಾನ್ಯ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತದೆ. ಅಲ್ಲದೇ ಸರ್ಕಾರದ ಬಹುತೇಕ ಎಲ್ಲ ಕಚೇರಿಗಳಲ್ಲಿ ಅಧಿಕಾರಿಗಳು ಅಧಿವೇಶನ ಕೆಲಸದಲ್ಲಿ ನಿರತರಾಗುತ್ತಾರೆ. ಇದರಿಂದ ಅಧಿವೇಶನ ಮೊದಲು ಒಂದು ತಿಂಗಳು, ಮುಗಿದ ನಂತರ ಎಂಟು ದಿನ ಸಾರ್ವಜನಿಕರ ಕೆಲಸಗಳು ಆಗುವುದಿಲ್ಲ. ಇಷ್ಟೆಲ್ಲ ಸಮಸ್ಯೆ ಅನುಭವಿಸಿದರೂ ಅದರ ಫಲಶೃತಿ ಮಾತ್ರ ಸೊನ್ನೆ. ಆದ್ದರಿಂದ 20 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಇಲ್ಲಿ ಅಧಿವೇಶನ ಹಮ್ಮಿಕೊಳ್ಳುವುದು ವ್ಯರ್ಥ. ಇದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಕಲಾಪದ ಅತ್ಯಮೂಲ್ಯ ಸಮಯ ಬಲಿ ಕೊಡಬೇಡಿ: ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚಿಸಬೇಕು. ನೀರಾವರಿ, ಶಿಕ್ಷಣ, ರಸ್ತೆ, ಸೇತುವೆ, ಐಟಿ, ಬಿಟಿ ಸೇರಿ ದೊಡ್ಡ ಕೈಗಾರಿಕೆಗಳ ಸ್ಥಾಪನೆ, ಮಹಾದಾಯಿ ಯೋಜನೆ ಅನುಷ್ಠಾನ, ಬೆಳಗಾವಿ ಜಿಲ್ಲಾ ವಿಭಜನೆ, ಸುವರ್ಣ ಸೌಧಕ್ಕೆ ಕಾರ್ಯದರ್ಶಿ ಮಟ್ಟದ ಕಚೇರಿ ಸ್ಥಳಾಂತರ ಸೇರಿ ಇನ್ನು ಪ್ರಮುಖ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ಆಗಬೇಕು. ಪ್ರತಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುತ್ತೇವೆಂದು ಸಭಾಧ್ಯಕ್ಷರು, ಸಭಾಪತಿಗಳು ಹೇಳುತ್ತಾ ಬರುತ್ತಾರೆ. ಆದರೆ, ಅಧಿವೇಶನ ಕಲಾಪ ಪ್ರಾರಂಭ ಆಗುತ್ತಿರುವಂತೆ ಕುರ್ಚಿ ಕಾದಾಟ, ಸದಸ್ಯರುಗಳ ವೈಯಕ್ತಿಕ ನಡವಳಿಕೆ, ಆರೋಪ – ಪ್ರತ್ಯಾರೋಪ ಸೇರಿ ಮತ್ತಿತರ ಕ್ಷುಲ್ಲಕ ವಿಷಯಗಳ ಕುರಿತು ಗದ್ದಲ ಕೋಲಾಹಲ, ಪ್ರತಿಭಟನೆಗಳ ಮಧ್ಯೆ ಕಲಾಪದ ಅತ್ಯಮೂಲ್ಯ ಸಮಯವನ್ನು ಬಲಿ ಪಡೆಯಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ಉತ್ತರ ಕರ್ನಾಟಕ ಬಗ್ಗೆ ಮಾತ್ರ ಚರ್ಚೆಗೆ ಅವಕಾಶ ಕೊಡಿ: ಉತ್ತರ ಕರ್ನಾಟಕ ಅಭಿವೃದ್ದಿ ಸಲುವಾಗಿಯೇ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಇಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಭಾಗದ ಸಮಸ್ಯೆಗಳನ್ನು ಬಿಟ್ಟು ಬೇರೆ ವಿಷಯ ಹಾಗೂ ಉತ್ತರ ಕರ್ನಾಟಕದ ಸಂಬಂಧ ಪಡದ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬಾರದು. ಅಂದಾಗ ಮಾತ್ರ ಚಳಿಗಾಲ ಅಧಿವೇಶನ ನಡೆಸಿದ್ದು ಸಾರ್ಥಕ ಆಗುತ್ತದೆ. ಅಲ್ಲದೇ ಇಲ್ಲಿ ಆದ ಚರ್ಚೆಗಳು ಅನುಷ್ಠಾನಕ್ಕೆ ಬಾರದೆ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ
Laxmi News 24×7