ಬೆಂಗಳೂರು: ನಾವು ಡಿಸಿಎಂ ಮಾಡದೇ ಇದಿದ್ದರೆ ಕಾಂಗ್ರೆಸ್ ಅವರನ್ನು ಮೂಸಿ ನೋಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪಕ್ಷದಲ್ಲಿ ರಾಜಕೀಯ ಜನ್ಮ ಪಡೆದು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಬೇರೆ ಪಕ್ಷಕ್ಕೆ ಜಂಪ್ ಮಾಡಿದ ವ್ಯಕ್ತಿ, ನನ್ನ ರಾಜಕೀಯ ಉದ್ಧಾರಕ್ಕೆ ಮತ್ತೊಬ್ಬರು ಕಾರಣರು ಅಂತ ಕೋಲಾರದಲ್ಲಿ ಹೇಳಿದ್ದರು. ನಿನ್ನೆ ಚಾಮರಾಜನಗರದಲ್ಲಿ ಇದೇ ವ್ಯಕ್ತಿ ನಾನು ಜೆಡಿಎಸ್ನಲ್ಲಿ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಎರಡು ಸಲ ಡಿಸಿಎಂ ಮಾಡಿದ್ದು ಯಾರು? ನಾವು ಅವರನ್ನು ಡಿಸಿಎಂ ಮಾಡದೇ ಇಲ್ಲದಿದ್ದರೆ ಕಾಂಗ್ರೆಸ್ ಮೂಸಿ ನೋಡುತ್ತಿರಲಿಲ್ಲ ಎಂದು ಟೀಕಿಸಿದರು.
ದೇವೇಗೌಡರ ತ್ಯಾಗ ದೊಡ್ಡದು: ಪಕ್ಷವನ್ನು ಕಟ್ಟಲು ದೇವೇಗೌಡ ಅವರು ಅನುಭವಿಸಿದ ಕಷ್ಟ ಅವರಿಗಷ್ಟೇ ಗೊತ್ತು. ಅವರ ತ್ಯಾಗವನ್ನು ನಾವು ಲಘುವಾಗಿ ಪರಿಗಣಿಸಬಾರದು. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣವನ್ನು ಬಲಿಷ್ಠವಾಗಿ ಸಂಘಟಿಸಿದವರು ದೇವೇಗೌಡರೇ ಆಗಿದ್ದಾರೆ. ದೇವೇಗೌಡರು ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಹಾಗೆಯೇ ಎಷ್ಟು ಜನ ನಾಯಕರನ್ನು ಬೆಳೆಸಿದರು, ಎಷ್ಟು ಸಮುದಾಯಗಳಿಗೆ ಶಕ್ತಿ ತುಂಬಿದರು ಎಂಬ ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದ ಹೆಚ್ಡಿಕೆ, ಪಕ್ಷ ಸಂಘಟನೆಯಲ್ಲಿ ಉದಾಸೀನ ಮಾಡುವ ಹಾಗಿಲ್ಲ. ಜಿಲ್ಲಾಧ್ಯಕ್ಷರು ಕಠಿಣವಾಗಿ ಕೆಲಸ ಮಾಡಬೇಕು. ಸಂಘಟನೆಯ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು ಎಂದು ಕರೆ ನೀಡಿದರು.
Laxmi News 24×7