ಚಾಮರಾಜನಗರ : ಮೈ ತುಂಬಾ ಸಾಲ ಮಾಡಿಕೊಂಡಿದ್ದವನಿಗೆ ವೃದ್ಧನ ಮೈ ಮೇಲಿದ್ದ ಬಂಗಾರ ಮಾಡಬಾರದ ಕೆಲಸವನ್ನೇ ಮಾಡಿಸಿದೆ. ಸಾಲದ ಹಣವನ್ನು ಕೇಳಿದ್ದಕ್ಕೆ ವಯೋವೃದ್ಧನನ್ನು ಕೊಂದ ಮೂವರು ಈಗ ಜೈಲುಪಾಲಾಗಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿದ್ದ ವೃದ್ದನನ್ನು ಮಿಸುಕಾಡದಂತೆ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಡೆಡ್ಲಿ ಗ್ಯಾಂಗ್ ಕೊನೆಗೂ ಬಂಧನವಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇಗೂರಿನಲ್ಲಿ ಬದುಕು ಕಟ್ಟಿಕೊಂಡು ವಾಸವಾಗಿದ್ದ ಹೆಚ್. ಎಂ. ಸ್ವಾಮಿ(73) ಕೊಲೆಯಾದ ದುರ್ದೈವಿ. ಸಾಲದ ಹಣ ಕೊಡ್ತಿನಿ ಬಾ ಎಂದು ಕರೆಸಿಕೊಂಡ ತೊಂಡವಾಡಿ ಗ್ರಾಮದ ಪರಶಿವಮೂರ್ತಿ ಹಾಗೂ ಈತನಿಗೆ ಸಾಥ್ ಕೊಟ್ಟ ಸಿದ್ದರಾಜು ಮತ್ತು ಮಹೇಶ್ ಎಂಬವರು ಜೈಲುಪಾಲಾಗಿದ್ದಾರೆ.ವೃದ್ಧ ಸ್ವಾಮಿಯು ಜೀವನೋಪಾಯಕ್ಕಾಗಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅದೇ ರೀತಿ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪರಶಿವನಿಗೂ 20 ಸಾವಿರ ಸಾಲ ಕೊಟ್ಟಿದ್ದರು. ಸ್ವಾಮಿ ಅವರಿಗೆ ಚಿನ್ನದ ಮೇಲೆ ಮೋಹವೂ ಇತ್ತು. ನಾಲ್ಕು ಉಂಗುರ, ಬ್ರೇಸ್ ಲೆಟ್, ಸರ ಹೀಗೆ ಒಟ್ಟು 105 ಗ್ರಾಂ ಚಿನ್ನಾಭರಣ ಧರಿಸುತ್ತಿದ್ದರು. ಮೈತುಂಬಾ ಸಾಲ ಮಾಡಿಕೊಂಡಿದ್ದ ಪರಶಿವ ವೃದ್ದನ ಮೇಲಿನ ಚಿನ್ನ ಕಂಡು ಪ್ಲಾನ್ ಮಾಡಿ ಸಿದ್ದರಾಜು, ಮಹೇಶ್ ಜೊತೆ ಪಿತೂರಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7