ಚಾಮರಾಜನಗರ: ಹಾಡಹಗಲೇ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಂಚಹಳ್ಳಿ ಗ್ರಾಮದಲ್ಲಿ ದೀಪಕ್ ಎಂಬುವವರಿಗೆ ಸೇರಿದ ಹಸುಗಳು ಇದಾಗಿದ್ದು, ಕೆರೆ ಪಕ್ಕದ ಜಮೀನಿನಲ್ಲಿ ಮೇವು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಹುಲಿ ಎರಡು ಹಸುಗಳನ್ನು ಕೊಂದು ರಕ್ತ ಹೀರಿದೆ. ಸುತ್ತಮುತ್ತಲ ರೈತರೆಲ್ಲಾ ಕೂಗಿಕೊಂಡ ಹಿನ್ನೆಲೆ ಹುಲಿ ಪರಾರಿಯಾಗಿದೆ. ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಿದ ಕೂಡಲೇ ಆಗಮಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಹುಲಿ ಸಿಕ್ಕಿಲ್ಲ. ನಂತರ ಡ್ರೋನ್ ಹಾರಿಸಿದ್ದಾರೆ. ಆದರೂ ಕೂಡ ಹುಲಿ ಪತ್ತೆಯಾಗಿಲ್ಲ.
ಮೇವು ಮೇಯುತ್ತಿದ್ದ ಎರಡು ಹಸುಗಳ ಮೇಲೆ ಹುಲಿ ದಿಢೀರ್ ದಾಳಿ ನಡೆಸಿ ಕೊಂದು ಹಾಕಿರುವುದರಿಂದ ರೈತರು ಬೆಚ್ಚಿ ಬಿದ್ದಿದ್ದು, ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಸಾಕಾನೆ ಹಾಗೂ ತಜ್ಞರನ್ನು ಕರೆಸಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಎರಡು ಹಸುಗಳನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿರುವುದರಿಂದ ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದೆ. ಆದ್ದರಿಂದ ಅರಣ್ಯಾಧಿಕಾರಿ ಕೂಡಲೇ ಸೂಕ್ತ ಪರಿಹಾರ ನೀಡಿ, ಘಟನೆಗಳು ಮುಂದಿನ ದಿನಗಳಲ್ಲಿ ಜರುಗದಂತೆ ಕ್ರಮ ವಹಿಸಬೇಕು ಎಂದು ರೈತ ಮುಖಂಡ ಮಂಚಹಳ್ಳಿ ಹರೀಶ್ ಒತ್ತಾಯಿಸಿದ್ದಾರೆ. ಸೋಮವಾರವಷ್ಟೇ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಹುಲಿ ಹಾಗೂ ಮೂರು ಮರಿಗಳನ್ನು ಕೂಂಬಿಂಗ್ ನಡೆಸಿ ಸೆರೆ ಹಿಡಿಯಲಾಗಿತ್ತು. ಈಗ, ಓಂಕಾರ್ ವಲಯದಲ್ಲಿ ಹುಲಿ ದಾಳಿ ನಡೆದಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ.
Laxmi News 24×7