ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕ ರಾಜು ಕಾಗೆ ಅವರನ್ನು ಜಾರಕಿಹೊಳಿ ಬಣ ಆಯ್ಕೆ ಮಾಡಿದ್ದು, ಈ ಇಬ್ಬರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮೊದಲು ಖಾಸಗಿ ಹೋಟೆಲ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ 13 ನಿರ್ದೇಶಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಒಮ್ಮತದಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ, ರಾಜು ಕಾಗೆ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಆ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನೂತನ ಅಧ್ಯಕ್ಷರಾಗಿ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆ ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಈ ವೇಳೆ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗೂಡೆ, ಮಹಾಂತೇಶ ದೊಡ್ಡಗೌಡರ, ಗಣೇಶ ಹುಕ್ಕೇರಿ, ಅರವಿಂದ ಪಾಟೀಲ, ವಿರೂಪಾಕ್ಷಿ ಮಾಮನಿ, ವಿಶ್ವಾಸ ವೈದ್ಯ, ನಾನಾಸಾಹೇಬ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, “ಎಲ್ಲ ನಿರ್ದೇಶಕರ ಅಭಿಪ್ರಾಯ ಪಡೆದು ಆಯ್ಕೆ ಮಾಡಿದ್ದೇವೆ. 30 ತಿಂಗಳ ಅವಧಿಗೆ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷ, ಕಾಂಗ್ರೆಸ್ನ ರಾಜು ಕಾಗೆ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂದಿನ 30 ತಿಂಗಳ ಅವಧಿಗೆ ಕಾಂಗ್ರೆಸ್ ನಿರ್ದೇಶಕರಿಗೆ ಅಧ್ಯಕ್ಷ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ನಿರ್ಧರಿಸಿದ್ದೇವೆ. ಹಿಂದಿನ ಅವಧಿಯಲ್ಲಿ ನಮ್ಮ 3 ಸದಸ್ಯರಿದ್ದರೂ ಕಾಂಗ್ರೆಸ್ ಪಕ್ಷದ ಅಪ್ಪಾಸಾಹೇಬ ಕುಲಗೂಡೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಹಾಗಾಗಿ, ಈ ಬಾರಿ ಬಿಜೆಪಿಯವರಿಗೆ ಅವಕಾಶ ನೀಡಲಾಗಿದೆ” ಎಂದರು.
ಕತ್ತಿ, ಸವದಿ ಸೈಲೆಂಟ್: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಬಣದಿಂದ ಮಾತ್ರ ನಾಮಪತ್ರ ಸಲ್ಲಿಕೆ ಆಗಿದೆ. ಮತ್ತೊಂದೆಡೆ ಕತ್ತಿ, ಸವದಿ ಬಣದಿಂದ ಯಾರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಜಾರಕಿಹೊಳಿ ಬಣದಲ್ಲಿ 13 ನಿರ್ದೇಶಕರಿದ್ದರೆ, ಮಾಜಿ ಅಧ್ಯಕ್ಷರಾದ ರಮೇಶ ಕತ್ತಿ, ಲಕ್ಷ್ಮಣ ಸವದಿ, ರಾಮದುರ್ಗ ನಿರ್ದೇಶಕ ಮಲ್ಲಣ್ಣ ಯಾದವಾಡ ಹಾಗೂ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಅಶೋಕ ಪಟ್ಟಣ ತಟಸ್ಥವಾಗಿ ಉಳಿದಿದ್ದಾರೆ.
Laxmi News 24×7