ಬೆಂಗಳೂರು, ಡಿ.31- ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಅಸಮಾಧಾನ ನಿವಾರಿಸಲು ನಿಗದಿಯಾಗಿದ್ದ ಉತ್ತರಾಯಣ ಡೆಡ್ ಲೈನ್ ಸಮೀಪಿಸುತ್ತಿದೆ. ಹೊಸ ವರ್ಷದ ಸಂಕ್ರಮಣಕ್ಕೆ ಭಿನ್ನಮತ ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇದರ ಭಾಗವಾಗಿ ಮುಖ್ಯಮಂತ್ರಿ ರೂಪಿಸಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ರಣತಂತ್ರ ಯಶಸ್ಸು ಆಗುತ್ತಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಬರುವ ಸಂಕ್ರಮಣದ ಉತ್ತರಾಯಣದವರೆಗೂ ಕಾದು ನೋಡಿ ಎಂದು ನಾಯಕತ್ವ ಬದಲಾವಣೆಗೆ ಅಗ್ರಸ್ಥಾನದಲ್ಲಿ ನಿಂತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದರು. ಅಚ್ಚರಿ ಏನೆಂದರೆ, ಜ.16ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಶಿವಮೊಗ್ಗದ ಭದ್ರಾವತಿಯಲ್ಲಿ ಆರ್‍ಎಎಫ್ ಕ್ಯಾಂಪಸ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಬರುತ್ತಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಸೊಲ್ಲೆತ್ತದಂತೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿ ಹಂತಹಂತವಾಗಿ ಶಾಸಕರ ಜತೆ ಸಮಾಲೋಚನೆ ನಡೆಸಿದ್ದ ನಾನು ಪ್ರಶ್ನಾತೀತ ನಾಯಕ ಎಂಬ ಸಂದೇಶ ಕೇಂದ್ರ ನಾಯಕರಿಗೆ ರವಾನಿಸಲು ಶಾಸಕಾಂಗ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.
ಬಿ.ಎಸ್.ಯಡಿಯೂರಪ್ಪ ಅವರು ಜ.2 ಮತ್ತು 3ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಮುಗಿಯುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ನಡೆಸಲು ಮುಖ್ಯಮಂತ್ರಿಗಳ ಸಂದೇಶ ರವಾನಿಸಿದ್ದಾರೆ.