ಚಾಮರಾಜನಗರ: ಒಂದೆಡೆ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳ ಜೊತೆ ಖಾಸಗಿ ವ್ಯಕ್ತಿಗಳು ರಾತ್ರಿ ಹೊತ್ತು ವಿಡಿಯೋ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿ ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಪುಣಜನೂರು-ಬೇಡಗುಳಿ ರಸ್ತೆಯಲ್ಲಿ ಕಳೆದ ಅ.14 ರಂದು ತಾಯಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದವು. ಖಾಸಗಿ ವ್ಯಕ್ತಿಗಳು ಆ ಮರಿಗಳನ್ನು ಹಿಡಿದು ವಿಡಿಯೋ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಬೇಡಗುಳಿಯಲ್ಲಿರುವ ಅತ್ತಿಖಾನೆ ಎಸ್ಟೇಟ್ನ ಜಾವಿದ್, ರಫೀಕ್ ಎಂಬುವರು ರಾತ್ರಿ ವೇಳೆ ಜೀಪ್ನ ಹೆಡ್ ಲೈಟ್ ಬೆಳಕಿನಲ್ಲಿ ಹುಲಿ ಮರಿಗಳ ಜೊತೆ ವಿಡಿಯೋ ಮಾಡಿದ್ದು, ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಕೊಟ್ಟಿದ್ದಾರೆ.
ಈ ಕುರಿತು ದಿನೇಶ್ ಕಲ್ಲಹಳ್ಳಿ ಮಾತನಾಡಿ, ಕೋರ್ ಏರಿಯಾದಲ್ಲಿರುವ ಹುಲಿ ಮರಿಗಳನ್ನು ಕಂಡ ವೇಳೆ ವಿಡಿಯೋ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರಣ್ಯಾಧಿಕಾರಿಗಳ ಬೆಂಬಲ ಇಲ್ಲದೇ ಇವರು ರಾತ್ರಿ ವೇಳೆ ಕೋರ್ ಏರಿಯಾದಲ್ಲಿ ಹುಲಿ ಮರಿಗಳ ವಿಡಿಯೋ ಮಾಡಲು ಸಾಧ್ಯವಿಲ್ಲ. 10 ದಿನಗಳ ಮರಿಯನ್ನು ಇವರು ಸ್ಪರ್ಶ ಮಾಡಿದ್ದಾದರೂ ಏಕೆ? ಈ ಬಗ್ಗೆ ಅರಣ್ಯ ಸಚಿವರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ, ಮೊಬೈಲ್ನಲ್ಲಿ ವಿಡಿಯೋ ಸೆರೆ: ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ವನ್ಯಪ್ರಾಣಿಗಳ ಓಡಾಟ ಹೆಚ್ಚಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿಯಲ್ಲಿ ಇಂದು ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಪವನ್ ಎಂಬ ಯುವಕ ಜಮೀನಿನತ್ತ ತೆರಳುವಾಗ ಚಿರತೆ ಕಂಡು, ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಈ ಕುರಿತು ಗುಂಡ್ಲುಪೇಟೆ ಡಿಆರ್ಎಫ್ಒ ಶಿವಕುಮಾರ್ ಪ್ರತಿಕ್ರಿಯಿಸಿ, ಬೆಳಗ್ಗೆ ಕಾಣಿಸಿಕೊಂಡಿರುವುದು ಚಿರತೆಯಾಗಿದ್ದು, ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿದ ವೇಳೆ ಪತ್ತೆಯಾಗಿಲ್ಲ, ಬೇರೆಡೆ ಹೋಗಿದೆ. ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Laxmi News 24×7