ಬೆಂಗಳೂರು: ಮದ್ಯ ಸೇವಿಸಿ ಶಾಲಾ ವಾಹನಗಳನ್ನು ಓಡಿಸುವ ಚಾಲಕರ ವಿರುದ್ಧ ನಗರ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 36 ಚಾಲಕರು ಕುಡಿದು ವಾಹನ ಚಲಾಯಿಸಿರುವುದನ್ನು ಪತ್ತೆ ಹಚ್ಚಿದ್ಧಾರೆ.
ಹಲಸೂರು ಗೇಟ್, ಅಶೋಕನಗರ, ಸದಾಶಿವನಗರ, ಬ್ಯಾಟರಾಯನಪುರ, ಮಾಗಡಿ ರೋಡ್ ಸೇರಿದಂತೆ 15 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂದು ಬೆಳಗ್ಗೆ 7.30ರಿಂದ 9.30ರ ವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 5,881 ಶಾಲಾ ಬಸ್ಗಳ ಚಾಲಕರನ್ನು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಯಿತು. ಈ ವೇಳೆ ಕುಡಿದು ವಾಹನ ಚಾಲನೆ ಮಾಡುತ್ತಿದ್ದ 36 ಮಂದಿ ಚಾಲಕರು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ಧಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಸದ್ಯ 36 ಮಂದಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಪರವಾನಗಿ (ಡಿಎಲ್)ರದ್ದು ಕೋರಿ ಆರ್ಟಿಒಗೆ ಶಿಫಾರಸು ಮಾಡಿದ್ದಾರೆ. ಸಿಕ್ಕಿಬಿದ್ದ ಚಾಲಕರು ಕೆಲಸ ಮಾಡುತ್ತಿದ್ದ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ”ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಇಂದು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶಾಲಾ ವಾಹನ ಚಾಲಕರಿಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲಾಗಿತ್ತು. ಹಲವು ಚಾಲಕರು ಕುಡಿದು ವಾಹನ ಚಾಲನೆ ಮಾಡಿರುವುದು ಗೊತ್ತಾಗಿದೆ. ಅಂಥವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಡಿಎಲ್ ರದ್ದುಪಡಿಸಲು ಆರ್ಟಿಓಗೆ ಪತ್ರ ಬರೆಯಲಾಗಿದೆ” ಎಂದರು.
Laxmi News 24×7