ಹಾವೇರಿ: ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಲಾಗಿದೆ. ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಏಲಕ್ಕಿನಗರಿ ಹಾವೇರಿಯಲ್ಲೂ ಶರನ್ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ದಸರಾ ಸಂದರ್ಭ 9 ದಿನಗಳ ಕಾಲ ಒಂದೊಂದು ದುರ್ಗಾ ಮಾತೆಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಈ ಹಿನ್ನೆಲೆ ಹಾವೇರಿಯ ನವದುರ್ಗೆಯರ ದೇವಸ್ಥಾನವನ್ನು ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ.
ಈ ದೇವಸ್ಥಾನದ ಒಂದೇ ಗರ್ಭ ಗುಡಿಯಲ್ಲಿ ಒಂಭತ್ತು ದುರ್ಗೆಯರ ಸ್ಥಾಪನೆಯಾಗಿರುವುದು ವಿಶೇಷ. ನವರಾತ್ರಿಯ ಈ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಮೊದಲ ದಿನ ಶೈಲಪುತ್ರಿ, ಎರಡನೇಯ ದಿನ ಬ್ರಹ್ಮಚಾರಿಣೀ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನ ಕೂಷ್ಮಾಂಡಾ, ಐದನೇಯ ದಿನ ಸ್ಕಂದಮಾತಾ, ಆರನೇಯ ದಿನ ಕಾತ್ಯಾಯಿನಿ, ಏಳನೇಯ ದಿನ ಕಾಲರಾತ್ರಿ, ಎಂಟನೇಯ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ, ಒಂಭತ್ತನೆಯ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿದಿನ ಒಂದೊಂದು ದುರ್ಗೆಗೆ ಪೂಜೆ ಸಲ್ಲಿಸಲಾಗುತ್ತದೆ.
ಮೊದನೇಯ ದಿನವಾದ ಸೋಮವಾರ ಶೈಲಪುತ್ರಿಗೆ ಪೂಜೆ ಸಲ್ಲಿಸಿದರೆ ಎರಡನೇಯ ದಿನವಾದ ಮಂಗಳವಾರ ಬ್ರಹ್ಮಚಾರಿಣಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿದಿನ ಸಂಜೆ ದೇವಸ್ಥಾನದಲ್ಲಿ ಕುಂಕುಮಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಮಹಿಳೆಯರು ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನವದುರ್ಗೆಯರು ಕೃಪೆಗೆ ಪಾತ್ರರಾಗುತ್ತಾರೆ.
Laxmi News 24×7