Breaking News

ಚಡಚಣದಲ್ಲಿ ಅತಿದೊಡ್ಡ ಬ್ಯಾಂಕ್ ದರೋಡೆ: SBI ಮ್ಯಾನೇಜರ್, ಕ್ಯಾಶಿಯರ್ ಕೈಕಾಲು ಕಟ್ಟಿ, ಕೂಡಿ ಹಾಕಿ ನಗದು ದೋಚಿ ದುಷ್ಕರ್ಮಿಗಳು ಪರಾರಿ

Spread the love

ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನ ಪ್ರಕರಣ ವರದಿಯಾಗಿದೆ. ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಈ ದರೋಡೆ ನಡೆದಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: ಮುಖಕ್ಕೆ ಮುಸುಕು ಹಾಕಿಕೊಂಡು ಹಾಗೂ ಮಿಲಿಟರಿ ಮಾದರಿ ಬಟ್ಟೆ ಹಾಕಿಕೊಂಡು ಬಂದ ದರೋಡೆಕೋರರು ಚಡಚಣ ಪಟ್ಟಣದ ಎಸ್​​​ಬಿಐ ಬ್ಯಾಂಕ್ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರ ಸಿಬ್ಬಂದಿಗಳ ಕೈಕಾಲು ಕಟ್ಟಿ ಕೂಡಿ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಕೋರರು ಕಂಟ್ರಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದು, ಬ್ಯಾಂಕ್ ನಲ್ಲಿದ್ದ ನಗದು ಚಿನ್ನಾಭರಣ ದೋಚಿ‌ ಪರಾರಿಯಾಗಿದ್ದಾರೆ. ದರೋಡೆಕೋರರ ಗ್ಯಾಂಗ್ ಬ್ಯಾಂಕ್​ನಿಂದ ಎಷ್ಟು ನಗದು‌, ಚಿನ್ನದ ಆಭರಣಗಳನ್ನು ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶ್ವಾನದಳ, ಬೆರಳಚ್ಚು‌ದಳ‌ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಬ್ಯಾಂಕ್​ ನಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಬ್ಯಾಂಕ್​ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸುದ್ದಿ ತಿಳಿದು ಬ್ಯಾಂಕ್ ಎದುರಿಗೆ ಸ್ಥಳೀಯರು ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಎಸ್​ಪಿ ಪ್ರತಿಕ್ರಿಯೆ: ಬ್ಯಾಂಕ್ ನಲ್ಲಿ ಕಳ್ಳತನ ಆಗಿರೋ ಬಗ್ಗೆ ಮಾಹಿತಿ ಬಂದಿದ್ದು, ನಗದು, ಚಿನ್ನಾಭರಣ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಈವರೆಗೂ ಎಷ್ಟು ಹಣ, ಚಿನ್ನಾಭರಣ ಕಳ್ಳತನ ಆಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪರಿಶೀಲನೆ ಕಾರ್ಯ ನಡೆದಿದೆ. ಬ್ಯಾಂಕಿನ ಅಧಿಕಾರಿಗಳು, ಮೇಲಧಿಕಾರಿಗಳು ಆಗಮಿಸಿದ ನಂತರವಷ್ಟೇ ದರೋಡೆಯಾದ ನಗದು, ಚಿನ್ನದ ಆಭರಣ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ, ಆ ಬಳಿಕವಷ್ಟೇ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

ಬೃಹತ್ ಮೊತ್ತದ ಚಿನ್ನಾಭರಣ, ನಗದು ಕಳ್ಳತನ ಆಗಿರೋ ಶಂಕೆ ಇದೆ ಎಂದು ಅವರು ಹೇಳಿದ್ದು, ಸಂಜೆ ಅಂದಾಜು 6-30ಗಂಟೆ ಹೊತ್ತಿಗೆ ಮುಸುಕುಧಾರಿಗಳು ಬ್ಯಾಂಕ್ ಗೆ ಎಂಟ್ರಿ ಕೊಟ್ಟು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.ಬ್ಯಾಂಕ್​ ದೋಚಿದ ಮುಸುಕುಧಾರಿಗಳು ಮಹಾರಾಷ್ಟ್ರದತ್ತ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಚಡಚಣ ಪಟ್ಟಣದಿಂದ ಹುಲಜಂತಿ ಮಾರ್ಗವಾಗಿ ಪರಾರಿಯಾಗಿರೋ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ‌ಶ್ವಾನದಳ, ಬೆರಳಚ್ಚು‌ದಳ‌ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಸಕಲ ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ