ಬೀದರ್: ಮಲ ಮಗಳಿಗೂ ಆಸ್ತಿ ಹಂಚಿಕೆ ಆಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೂರು ಮಹಡಿ ಕಟ್ಟಡದ ಮೇಲಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ಇಲ್ಲಿನ ನ್ಯೂ ಆದರ್ಶ ಕಾಲನಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾನ್ವಿ (6) ಮೃತ ಬಾಲಕಿ. ಪ್ರಕರಣದಲ್ಲಿ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆಗಸ್ಟ್ 27ರಂದು ಮಲತಾಯಿ ರಾಧಾ ಬಾಲಕಿಗೆ ಆಟವಾಡಿಸುವ ನೆಪದಲ್ಲಿ ಮೂರನೇ ಮಹಡಿಗೆ ಕರೆದೊಯ್ದಿದ್ದು, ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಮಗು ಆಯತಪ್ಪಿ ಬಿದ್ದಿದ್ದಾಳೆ ಎಂದು ನಂಬಿದ್ದರು. ಈ ಬಗ್ಗೆ ಆಕಸ್ಮಿಕವಾಗಿ ಬಿದ್ದ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಂದೆ ಸಿದ್ಧಾಂತ ನೀಡಿದ ದೂರಿನ ಮೇರೆಗೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಮುಂದುವರೆಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಿಸಿಟಿವಿ ದೃಶ್ಯದಿಂದ ಕೊಲೆ ಬಯಲಿಗೆ: ಕೆಲ ದಿನಗಳ ಬಳಿಕ ಸೆಪ್ಡಂಬರ್ 13ರಂದು ಸಾರ್ವಜನಿಕರೊಬ್ಬರು ನಮಗೆ ಸಿಸಿಟಿವಿ ದೃಶ್ಯಗಳನ್ನು ತಂದು ಕೊಟ್ಟರು. ವಿಡಿಯೋ ಪರಿಶೀಲಿಸಿದಾಗ, ಬಾಲಕಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿಲ್ಲ. ಮಲತಾಯಿಯೇ ತಳ್ಳಿ ಕೊಲೆ ಮಾಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ತಿಳಿದುಬಂದಿತ್ತು. ಅದರ ಪ್ರಕಾರ, ಬಾಲಕಿಯ ಅಜ್ಜಿ ಠಾಣೆಗೆ ಬಂದು ಕೊಲೆ ಪ್ರಕರಣ ದಾಖಲಿಸಿದರು. ಆ ಬಳಿಕ ನಾವು ಆರೋಪಿ ಮಹಿಳೆಯನ್ನು ಸೋಮವಾರ (ಸೆ.15) ಬಂಧನ ಮಾಡಿದ್ದೇವೆ. ಅಲ್ಲದೆ, ಆರೋಪಿಯು ತಾನು ಕೊಲೆ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಎಸ್ಪಿ ತಿಳಿಸಿದರು.
Laxmi News 24×7