ಮೈಸೂರು: ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಭಯದಲ್ಲಿಯೇ ಅರಣ್ಯ ವೀಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಚ್. ಡಿ. ಕೋಟೆ ತಾಲೂಕಿನ ಡಿ. ಬಿ. ಕುಪ್ಪೆ ವನ್ಯಜೀವಿ ವಲಯದಲ್ಲಿ ನಡೆದಿದೆ. ಮಾನೆಮೂಲೆ ಹಾಡಿಯ ನಿವಾಸಿಯಾಗಿದ್ದ ಅರಣ್ಯ ವೀಕ್ಷಕ ರಾಜು (45) ಸಾವಿಗೀಡಾದವರು.
ಈ ಘಟನೆ ನಡೆದಿದ್ದು ಹೇಗೆ?: ಎಂದಿನಂತೆ ಇತರ ಸಿಬ್ಬಂದಿಯೊಂದಿಗೆ ರಾಜು ಅವರು ಕಾಡಿನಲ್ಲಿ ಗಸ್ತು ತಿರುಗಲು ಹೋಗಿದ್ದರು. ಈ ವೇಳೆ ಕಾಡಾನೆಯೊಂದು ಸಿಬ್ಬಂದಿಯ ಮೇಲೆ ದಾಳಿಗೆ ಮುಂದಾಯಿತು. ಆನೆಯಿಂದ ತಪ್ಪಿಸಿಕೊಳ್ಳಲು ಓಡುವಾಗ ಗಾಬರಿಯಿಂದ ಕುಸಿದು ಬಿದ್ದು ರಾಜು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಕೂಡಲೇ ಜತೆಯಲ್ಲಿದ್ದ ಸಹ ಸಿಬ್ಬಂದಿ ಹರೀಶ್ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.
ವೈದ್ಯಕೀಯ ಪರೀಕ್ಷೆ ಬಳಿಕ ಶವ ಕುಟುಂಬಸ್ಥರಿಗೆ ಹಸ್ತಾಂತರ: ನಂತರ ಮೃತದೇಹವನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಡಿ. ಬಿ. ಕುಪ್ಪೆ ಆರ್ಎಫ್ಒ ಹನುಮಂತರಾಜು ಮತ್ತಿತರರು ಹಾಜರಿದ್ದರು. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆರ್ಎಫ್ಒ ಪ್ರತಿಕ್ರಿಯೆ ಹೀಗಿದೆ: ಈಟಿವಿ ಭಾರತ್ ಜೊತೆ ಮಾತನಾಡಿದ ಡಿ. ಬಿ. ಕುಪ್ಪೆ ಅರಣ್ಯ ವಲಯ ಆರ್ಎಫ್ಒ ಹನುಮಂತರಾಜು ಅವರು, “ಗಸ್ತಿನಲ್ಲಿದ್ದ ವೇಳೆಯಲ್ಲಿ ಮರಿಯೊಂದಿಗೆ ಹೋಗುವಾಗ ಆನೆ ದಾಳಿ ಮಾಡಲು ಯತ್ನಿಸಿದೆ. ಆಗ ಗಾಬರಿಯಿಂದ ಬಿದ್ದಿದ್ದಾರೆ ಎಂದು ಅರಣ್ಯ ವೀಕ್ಷಕ ರಾಜು ಅವರೊಂದಿಗೆ ಹೋಗಿದ್ದ ಅರಣ್ಯ ವೀಕ್ಷಕರು ಮಾಹಿತಿ ನೀಡಿದ್ದಾರೆ. ಇಲಾಖೆ ನಿಯಮಗಳ ಪ್ರಕಾರ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.
ಸಾವಿನ ಕುರಿತು ಆದಿವಾಸಿ ಮುಖಂಡರು ಹೇಳಿದ್ದಿಷ್ಟು: ಆದಿವಾಸಿ ಮುಖಂಡ ವಿಜಯ್ ಕುಮಾರ್ ಮಾತನಾಡಿ, “ರಾಜು ಅವರ ಕುಟುಂಬ ಅವರನ್ನೇ ಅವಲಂಬಿತವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅವರಿಗೆ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ. ನಮ್ಮವರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳ ಹಿಂದೆ ಮಾದ ಎನ್ನುವವನ ಮೇಲೆ ಕರಡಿ ದಾಳಿ ಮಾಡಿ, ಕಣ್ಣು ಹೋಗಿದೆ. ಹೀಗೆ ನಿರಂತರವಾಗಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಂಡು, ಜನರ ಪ್ರಾಣ ಉಳಿಸಬೇಕು” ಎಂದರು.
Laxmi News 24×7