ಉಡುಪಿ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ ಏಳು ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಓರ್ವನನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಆಗಮಿಸಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
Laxmi News 24×7