ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರದಿಂದ (ಸೆ.1) ಎರಡು ದಿನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೊತೆಗೆ ಆಯಿಷ್ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಗಳ ಸ್ವಾಗತಕ್ಕೆ ನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಸೆ.1 ರಂದು ನಡೆಯಲಿರುವ 60ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನ ಆಯಿಷ್ (ಎಐಐಎಸ್‌ಹೆಚ್) ನಲ್ಲಿ ಯಾವುದೇ ಚಿಕಿತ್ಸಾ ಸೇವೆಗಳು ಲಭ್ಯವಿರುವುದಿಲ್ಲ. ಜೊತೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಅಂದು ಸಂಸ್ಥೆಯ ಎಲ್ಲಾ ವಿಭಾಗಗಳಿಗೂ ರಜೆ ಘೋಷಿಸಲಾಗಿದೆ. ಚಿಕಿತ್ಸಾ ಸೇವೆ ಅಲಭ್ಯವಾಗುವ ಕಾರಣ ಸಾರ್ವಜನಿಕರು ಅಂದು ಸಂಸ್ಥೆಗೆ ಭೇಟಿ ನೀಡದಂತೆ ಸಂಸ್ಥೆಯ ನಿರ್ದೇಶಕರಾದ ಡಾ. ಎಂ.ಪುಷ್ಪಾವತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ರಾಷ್ಟ್ರಪತಿಗಳು ಸೆ.2 ರಂದು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲಿದ್ದಾರೆ. ಜೊತೆಗೆ ಬೆಳಗ್ಗೆ 8.30ಕ್ಕೆ ಪ್ರಸಿದ್ಧ ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಭದ್ರತಾ ಹಿತದೃಷ್ಟಿಯಿಂದ ಹಾಗೂ ಶಿಷ್ಟಾಚಾರ ಪಾಲನೆಗಾಗಿ ಅಂದು ಬೆಳಗ್ಗೆ 11.30ರ ವರಗೆ ಪ್ರವಾಸಿಗರಿಗೆ ಅರಮನೆಯ ಪ್ರವೇಶ, ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ ಸೆ.1ರಂದು ಮೈಸೂರು ಅರಮನೆ ಅವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣ ಸ್ವಚ್ಛ: ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ಬೆಳೆದಿದ್ದ ಅನಗತ್ಯ ಗಿಡಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ, ರಾಷ್ಟ್ರಪತಿಗಳು ಸಂಚರಿಸುವ ರಸ್ತೆಗಳ ಡಿವೈಡರ್‌ಗಳ ಮಧ್ಯೆ ಬೆಳೆದಿದ್ದ ಗಿಡ-ಗಂಟಿಗಳ ತೆರವು ಕಾರ್ಯಾಚರಣೆ ನಡೆದಿದೆ. ಹಂಪ್ಸ್‌ಗಳಿಗೆ ಬಿಳಿ ಬಣ್ಣ, ರಸ್ತೆ ಡಿವೈಡರ್‌ಗಳಿಗೆ ಬಿಳಿ, ಕಪ್ಪು, ಹಳದಿ ಬಣ್ಣ ಬಳಿಯಲಾಗಿದೆ.
ರಸ್ತೆ ಬದಿ ಅಂಗಡಿ ತೆರವು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.2ರಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿರುವ ಹಿನ್ನೆಲೆಯಲ್ಲಿ ಲಲಿತ ಮಹಲ್ ರಸ್ತೆಯಲ್ಲಿರುವ ಫಾಸ್ಟ್‌ಫುಡ್ ಅಂಗಡಿಗಳನ್ನು ಭಾನುವಾರ ತೆರವುಗೊಳಿಸಲಾಯಿತು.
Laxmi News 24×7