ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟು, 11 ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಬಡೇಕೊಳ್ಳಮಠ ಬಳಿಯ ರಾಷ್ಟ್ರೀಯ ಹೆದ್ದಾರಿ – 4ರಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಬಡೇಕೊಳ್ಳ ಘಾಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಿರು ಸೇತುವೆ ಗೋಡೆಗೆ ಡಿಕ್ಕಿಯಾದ ಪರಿಣಾಮ ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಓರ್ವ ಪುರುಷ ಮತ್ತು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹಿರೇಬಾಗೇವಾಡಿ ಪೊಲೀಸರು ಬಸ್ಸಿನೊಳಗೆ ಸಿಲುಕಿಕೊಂಡಿದ್ದ 11 ಜನರನ್ನು ಹೊರಕ್ಕೆ ತೆಗೆದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತರು ಮತ್ತು ಗಾಯಾಳುಗಳ ವಿವರ ಗೊತ್ತಾಗಬೇಕಿದೆ. ಬುಧವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಖಾಸಗಿ ಬಸ್ ಹುಬ್ಬಳ್ಳಿಯಿಂದ ಪುಣೆಗೆ ಹೋಗುತ್ತಿತ್ತು ಎಂಬುದು ತಿಳಿದುಬಂದಿದೆ.
ಬಡೇಕೊಳ್ಳಮಠ ಸ್ಥಳ ಒಂದು ರೀತಿ ಆಕ್ಸಿಡೆಂಟ್ ಜೋನ್ ಆಗಿದೆ. ಹಾಗಾಗಿ, ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೆ ಸೇರಿಕೊಂಡು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರೂ ಕೂಡ ಪ್ರಯೋಜನವಾಗಿಲ್ಲ.
Laxmi News 24×7