Breaking News

ರಾಜ್ಯದ ಮೆಡಿಕಲ್ ಹಾಸ್ಟೆಲ್ ಗಳಲ್ಲಿ ‘ಆತ್ಮಹತ್ಯೆ ನಿರೋಧಕ ಸಾಧನ’ ಅಳವಡಿಸಲು ಚಿಂತನೆ

Spread the love

ಬೆಂಗಳೂರು: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಮಿಮ್ಸ್)ಯ ಇಬ್ಬರು ವಿದ್ಯಾರ್ಥಿಗಳು ಕೇವಲ ಎರಡೇ ವಾರಗಳ ಅಂತರದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಜುಲೈ 22ರಂದು ಎಂಬಿಬಿಎಸ್ ವಿದ್ಯಾರ್ಥಿನಿ ಭರತ್ ಯತ್ತಿನಮಣಿ (22) ಮತ್ತು ಆಗಸ್ಟ್ 2ರಂದು ನರ್ಸಿಂಗ್ ವಿದ್ಯಾರ್ಥಿನಿ ನಿಷ್ಕಲಾ (21) ಎಂಬವರು ಮೃತಪಟ್ಟಿದ್ದರು. ಈ ಘಟನೆಗಳು ರಾಜ್ಯದ ವೈದ್ಯಕೀಯ ಹಾಸ್ಟೆಲ್‌ಗಳಲ್ಲಿರುವ ಸೀಲಿಂಗ್ ಫ್ಯಾನ್‌ಗಳಲ್ಲಿ ಆತ್ಮಹತ್ಯೆ ನಿರೋಧಕ ಸಾಧನಗಳನ್ನು ಅಳವಡಿಸುವುದು ಮತ್ತು ಇತರೆ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್ ಜಿಯುಹೆಚ್ ಎಸ್) ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.

ಆತ್ಮಹತ್ಯೆ ನಿರೋಧಕ ಸಾಧನ ಹೇಗೆ ಕೆಲಸ ಮಾಡುತ್ತೆ?: ಆತ್ಮಹತ್ಯೆ ನಿರೋಧಕ ಸೀಲಿಂಗ್ ಫ್ಯಾನ್ ಸಾಧನವನ್ನು ನೇತಾಡುವ ಪ್ರಯತ್ನಗಳನ್ನು ತಡೆಯುವಂತೆ ತಯಾರು ಮಾಡಲಾಗಿದೆ. ಇದರ ಮೇಲೆ ಹೆಚ್ಚು ತೂಕ ಹಾಕಿದರೆ ಈ ಸಾಧನ ಫ್ಯಾನ್ ಅನ್ನು ಅದರ ಕೊಕ್ಕೆಯಿಂದ ಬೇರ್ಪಡಿಸಿ ನೆಲಕ್ಕೆ ಅಪ್ಪಳಿಸುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲ, ಸಮೀಪದಲ್ಲಿರುವ ಇತರರನ್ನು ಎಚ್ಚರಿಸಲು ಜೋರಾಗಿ ಸೈರನ್ ಮೊಳಗಿಸುತ್ತದೆ. ಈ ಕುರಿತು ಮಿಮ್ಸ್ ನಲ್ಲಿ ಪ್ರಾಯೋಗಿಕ ಪ್ರದರ್ಶನ ನಡೆದಿದೆ. ಇದಲ್ಲದೇ, ತನ್ನ ಮೇಲೆ ಹೆಚ್ಚು ಭಾರ ಬಿದ್ದಾಗ ದಿಢೀರ್ ಕುಸಿಯುವಂತಹ ಫ್ಯಾನ್‌ಗಳನ್ನು ಮೇಲ್ಛಾವಣಿಗಳಿಗೆ ಜೋಡಿಸುವ ಇತರ ವಿನ್ಯಾಸಗಳೂ ಚರ್ಚೆಯಲ್ಲಿವೆ.

ಡಾ.ಸಂಜೀವ್ ಅವರ ನೇತೃತ್ವದ ಆರ್ ಜಿಯುಹೆಚ್ ಎಸ್ ನ ಪಠ್ಯಕ್ರಮ ಅಭಿವೃದ್ಧಿ ಕೋಶವು ಜುಲೈ ತಿಂಗಳಾಂತ್ಯದಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಇಂಥದ್ದೊಂದು ಪ್ರಸ್ತಾವನೆಯನ್ನು ಸಿದ್ಧಪಡಿಸಲು ಮಿಮ್ಸ್ ಗೆ ಭೇಟಿ ನೀಡಿತ್ತು. ಆದರೆ ಇಂಥ ಸಾಧನಗಳನ್ನು ಅಳವಡಿಸಲು ಆಗುವ ವೆಚ್ಚ ಹಾಗು ಯೋಜನೆಯ ವಿವರಗಳು ಲಭ್ಯವಾಗಿಲ್ಲ. ಇಂಥ ಕ್ರಮವನ್ನು ಇತರೆ ಹಾಸ್ಟೆಲ್‌ಗಳಿಗೆ ವಿಸ್ತರಿಸುವ ಮೊದಲು ಮಿಮ್ಸ್ ನಲ್ಲಿ ಪ್ರಯೋಗಾತ್ಮಕವಾಗಿ ಅಳವಡಿಸುವ ಕುರಿತು ಚರ್ಚೆಗಳಾಗಿವೆ.

ವೈದ್ಯಕೀಯ ಸಚಿವರು, ತಜ್ಞರು ಏನಂತಾರೆ?: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ, “ಮಂಡ್ಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನಾವಳಿಗಳು ನನಗೆ ತೀವ್ರ ಬೇಸರ ಮೂಡಿಸಿವೆ. ಒತ್ತಡ, ಆತಂಕ ಮತ್ತು ಮಾನಸಿಕ ಖಿನ್ನತೆಗಳಿಂದ ವಿದ್ಯಾರ್ಥಿಗಳು ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಈ ರೀತಿಯ ಘಟನಾವಳಿಗಳನ್ನು ತಡೆಗಟ್ಟಲು ಮೆಡಿಕಲ್ ಹಾಸ್ಟೆಲ್ ಗಳ ಸೀಲಿಂಗ್ ಫ್ಯಾನ್‌ಗಳಿಗೆ ಆತ್ಮಹತ್ಯೆ ನಿರೋಧಕ ಸಾಧನಗಳೂ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಶೀಲಿಸಲಾಗುತ್ತಿದೆ. ವೃತ್ತಿಪರ ಸಲಹೆಗಾರರನ್ನು ಹೊಂದಿರುವ ಸಮಾಲೋಚನಾ ಕೇಂದ್ರಗಳು ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳಾಗಬೇಕಿದೆ” ಎಂದರು.

ಆದರೆ, ಇಂಥ ಸಾಧನಗಳು ಮಾತ್ರ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಸಾಧ್ಯವಿಲ್ಲ ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಮನೋವೈದ್ಯ ಡಾ.ಫರಾಜ್ ಸೈಯದ್ ಮೊಹಮ್ಮದ್ ಅವರ ಪ್ರಕಾರ, “ಆತ್ಮಹತ್ಯೆಗೆ ಯಾವಾಗಲೂ ಒತ್ತಡವೇ ಕಾರಣವಲ್ಲ. ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಕಾಯಿಲೆಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಇವುಗಳನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ನಾವು ಮೂಲ ಕಾರಣಗಳನ್ನು ಬಗೆಹರಿಸದಿದ್ದರೆ ಶಾಶ್ವತವಾಗಿ ಸಮಸ್ಯೆ ನಿರ್ಮೂಲನೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಾಯ ಪಡೆಯುವಂತೆ ಹಾಗು ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವುದು ಬಹಳ ಮುಖ್ಯ” ಎಂದರು.

ವೈದ್ಯಕೀಯ ವಿದ್ಯಾರ್ಥಿಗಳ ಮಾತು: ಈ ಕುರಿತಾಗಿ ಕೆಲವು ವಿದ್ಯಾರ್ಥಿಗಳು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ವಿಧುನ್ ರವಿ ಕುಮಾರ್ ಮಾತನಾಡಿ, “ಒತ್ತಡ ಎಂಬುದು ಸದ್ದಿಲ್ಲದೆ ಬೆಳೆಯುತ್ತದೆ. ಶೈಕ್ಷಣಿಕ, ಕುಟುಂಬದ ನಿರೀಕ್ಷೆಗಳು, ಆರ್ಥಿಕ ತೊಂದರೆಗಳು ಇವೆಲ್ಲ ಒತ್ತಡ ಬೆಳೆಯಲು ಕಾರಣಗಳು. ಆತ್ಮಹತ್ಯೆ ವಿರೋಧಿ ಸಾಧನಗಳು ಒಂದು ವಿಧಾನವನ್ನು ತಡೆಯಬಹುದಷ್ಟೇ. ಮುಕ್ತ ಮನಸ್ಸಿನ ಸಂಭಾಷಣೆಗಳು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳು ನಿಜವಾದ ಪರಿಹಾರವಾಗಬಲ್ಲದು” ಎಂದು ತಿಳಿಸಿದರು.

ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸುಫಿಯಾ ತಸ್ನೀಮ್ ಪ್ರಕಾರ, “ಒತ್ತಡ ನಿರಂತರವಾಗಿರುತ್ತದೆ. ಪರೀಕ್ಷೆಗಳು, ದೀರ್ಘ ಸಮಯಗಳು, ವೈಫಲ್ಯದ ಭಯ ಇದಕ್ಕೆ ಕಾರಣವಾಗುವ ಸಂಗತಿಗಳು. ಸ್ನೇಹಿತರ ಬೆಂಬಲ, ವಿರಾಮಗಳು ಮತ್ತು ಸಹಾಯ ಪಡೆಯುವುದು, ಯಾವುದು ಸರಿ ಎಂದು ತಿಳಿದುಕೊಳ್ಳುವುದೆಲ್ಲವೂ ಈ ನಿಟ್ಟಿನಲ್ಲಿ ವ್ಯತ್ಯಾಸ ಉಂಟುಮಾಡುತ್ತವೆ. ಸಾಧನಗಳು ಹಠಾತ್ ಪ್ರವೃತ್ತಿಯ ಕ್ರಿಯೆಯನ್ನು ನಿಲ್ಲಿಸಬಹುದು. ನಮಗೆ ಹಾಸ್ಟೆಲ್‌ಗಳಲ್ಲಿ ಹೆಚ್ಚು ಆಪ್ತ ಸಲಹೆಗಾರರು ಬೇಕು” ಎಂದರು.

ಎರಡನೇ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ ವಿಷ್ಣು ವಿ. ಪ್ರತಿಕ್ರಿಯಿಸಿ, “ಒಂಟಿತನ ಎಂಬುದು ಒಂದು ದೊಡ್ಡ ಪ್ರಚೋದಕ. ವಿಶೇಷವಾಗಿ ಮನೆಯಿಂದ ದೂರವಿರುವ ವಿದ್ಯಾರ್ಥಿಗಳು ಇದರಿಂದ ಬಳಲುತ್ತಾರೆ. ಮನರಂಜನಾ ಚಟುವಟಿಕೆಗಳು, ಸೂಕ್ತ ಮಾರ್ಗದರ್ಶನ ಮತ್ತು ಆಪ್ತ ಸಲಹೆಗಾರರು ಹಾಸ್ಟೆಲ್ ಜೀವನವನ್ನು ಬದಲಾಯಿಸಬಹುದು. ಸಾಧನಗಳು ಉತ್ತಮ ಸುರಕ್ಷತಾ ಕ್ರಮವೇನೋ ಹೌದು. ಆದರೆ ಅವು ಸಹಾನುಭೂತಿಯನ್ನು ಬದಲಾಯಿಸಲು ಸಾಧ್ಯವಿಲ್ಲ” ಎನ್ನುತ್ತಾರೆ.

ಹಾಸ್ಟೆಲ್ ಗಳಲ್ಲಿ ಕಾರ್ಯಾಗಾರಗಳು ಮತ್ತು ಗೆಳೆಯರ ಬೆಂಬಲ ಗುಂಪುಗಳು ಕಡ್ಡಾಯವಾಗಿರಬೇಕು. ತಡೆಗಟ್ಟುವಿಕೆ ಎಂಬುದು ಬಿಕ್ಕಟ್ಟಿನ ಕ್ಷಣಗಳಿಗಿಂತ ಮೊದಲೇ ಶುರುವಾದರೆ ಒಳ್ಳೆಯದು ಎಂಬುದು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅರ್ಜುನ್ ಪ್ರಸಾದ್ ಮಾತು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ