ಭೂಮಾಪಕರ ನೇಮಕಾತಿಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ; ಕಂದಾಯ ಸಚಿವ ಕೃಷ್ಣ ಭೈರೇಗೌಡ
ಅನುಮತಿ ಸಿಗುತ್ತಲೇ ನಿಪ್ಪಾಣಿಯಲ್ಲಿ ಸಹಾಯಕ ಭೂದಾಖಲೆಗಳ ನಿರ್ದೇಶಕರ ಕಛೇರಿ ಸ್ಥಾಪನೆ; ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪ್ರಶ್ನೆಗೆ ಪ್ರತಿಕ್ರಿಯೆ
ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದಲ್ಲಿ ಭೂಮಾಪಕರ ಕೊರತೆಯ ಬಗ್ಗೆ ಶಾಸಕ ಶಶಿಕಲಾ ಜೊಲ್ಲೆ ಅವರು ಪ್ರಶ್ನೆ ಎತ್ತಿದರು. ಈ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರ ನೀಡಿ, ರಾಜ್ಯದಲ್ಲಿ ಭೂಮಾಪಕರ ಕೊರತೆ ಇದೆ ಎಂಬುದು ಸರಕಾರದ ಗಮನಕ್ಕೆ ಬಂದಿದ್ದು, ತಕ್ಷಣದ ನೇಮಕಾತಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 4020 ಭೂಮಾಪಕರ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 3049 ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ. ಉಳಿದ 970 ಹುದ್ದೆಗಳು ಖಾಲಿ ಇರುವುದಾಗಿ ಸಚಿವರು ತಿಳಿಸಿದರು. ಖಾಲಿ ಹುದ್ದೆಗಳ ಭರ್ತಿಗಾಗಿ ಸರ್ಕಾರ 1/20 ನೇಮಕಾತಿಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಮೂಲಕ 253 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಆದರೆ, ಡಿಒಪಿಎಎಸ್‌ನ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) 29.03.2025ರ ಸುತ್ತೋಲೆ ಮೇರೆಗೆ 25.11.2024 ನಂತರ ಹೊರಡಿಸಲಾದ ಅಧಿಸೂಚನೆಗಳನ್ನು ರದ್ದುಪಡಿಸಲು ಸೂಚನೆ ನೀಡಿರುವುದರಿಂದ, ಈ ನೇಮಕಾತಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಸರ್ಕಾರ ಇನ್ನಷ್ಟು ಭೂಮಾಪಕರನ್ನು ನೇಮಕ ಮಾಡುವ ದೃಷ್ಟಿಯಿಂದ ಹೆಚ್ಚುವರಿ 1000 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಸಹಮತಿಗಾಗಿ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಇನ್ನು ಶಾಸಕಿ ಶಶಿಕಲಾ ಜೊಲ್ಲೆ ಎತ್ತಿದ ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿ ನಿಪ್ಪಾಣಿ ತಾಲ್ಲೂಕಿಗೆ ಸಹಾಯಕ ಭೂದಾಖಲೆಗಳ ನಿರ್ದೇಶಕರ ಕಛೇರಿ ಪ್ರಾರಂಭಿಸಲು ಆರ್ಥಿಕ ಇಲಾಖೆಯ ಅನುಮತಿ ನಿರೀಕ್ಷೆಯಲ್ಲಿದೆ. ಅನುಮತಿ ಸಿಕ್ಕ ತಕ್ಷಣ ಕಚೇರಿ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.