ಚಿಕ್ಕೋಡಿ (ಬೆಳಗಾವಿ) : ಭಾರತೀಯ ಸೈನ್ಯದಲ್ಲಿ ಕರ್ತವ್ಯದಲ್ಲಿದ್ದಾಗ ಅಗ್ನಿವೀರ್ ಯೋಧ ಕಿರಣರಾಜ ಕೇದಾರಿ ತೆಲಸಂಗ (23) ಎಂಬವರು ತೀವ್ರ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಇಂದು ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಐಗಳಿ ಗ್ರಾಮದಲ್ಲಿ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಳೆದ 15 ತಿಂಗಳಿನಿಂದ ಅಗ್ನಿವೀರ್ ಮುಖಾಂತರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಳೆದ ಮಂಗಳವಾರ ಬೆಳಿಗ್ಗೆ ಓಟದ ಸ್ಪರ್ಧೆಯ ನಂತರ ಹೃದಯಾಘಾತದಿಂದ ನಿಧನರಾಗಿದ್ದರು. ಇವತ್ತು (ಗುರುವಾರ) ಅವರ ಪಾರ್ಥಿವ ಶರೀರವನ್ನು ದೇಶಪ್ರೇಮಿಗಳ ಜೊತೆಗೆ ಅಥಣಿ ಪಟ್ಟಣದಿಂದ ಮೆರವಣಿಗೆ ಮುಖಾಂತರ ಸ್ವಗ್ರಾಮಕ್ಕೆ ತರಲಾಯಿತು.
ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ, ಜೈ ಜವಾನ್, ಕಿರಣರಾಜ ಅಮರ್ ರಹೋ… ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಐಗಳಿ ಗ್ರಾಮದಲ್ಲಿ ಶಾಲಾ ಮಕ್ಕಳ ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರೂ ಕೂಡ ಪಾರ್ಥಿವ ಶರೀರದ ಜೊತೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮುಖಾಂತರ ಮೃತಪಟ್ಟ ಯೋಧನಿಗೆ ಗ್ರಾಮಸ್ಥರು ಗೌರವ ಸಲ್ಲಿಸಿದರು. ಇತ್ತ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಹಲವು ರಾಜಕೀಯ ಮುಖಂಡರು, ಮಠಾಧೀಶರು, ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ಸಲ್ಲಿಸಿದರು. ಮತ್ತೊಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಳೆದ 15 ತಿಂಗಳ ಹಿಂದೆಯಷ್ಟೇ ಹಲವು ಕನಸುಗಳನ್ನು ಕಟ್ಟಿಕೊಂಡು ಸೇನೆಗೆ ಸೇರಿದ ಯುವಕರನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮಡುಗಟ್ಟಿತ್ತು.
‘ಮೊನ್ನೆ ಅಷ್ಟೇ ನನ್ನ ತಮ್ಮ ಗಣೇಶ ಹಬ್ಬಕ್ಕೆ ಬರುತ್ತೇನೆ ಎಂದು ದೂರವಾಣಿ ಮುಖಾಂತರ ಮಾತನಾಡಿದ್ದ. ಗಣೇಶ ಹಬ್ಬಕ್ಕೆ ಬರ್ತಿದಿಯಾ ಒಳ್ಳೆದಾಯ್ತು ಎಂದು ನಾನು ಸಂತೋಷಪಟ್ಟಿದ್ದೆ. ಆದರೆ ಇವತ್ತು ನನ್ನ ತಮ್ಮ ಶವವಾಗಿ ಬಂದಿದ್ದಾನೆ’ ಎಂದು ಸಹೋದರ ರವಿ ಕೇದಾರಿ ತೇಲಸಂಗ ದುಃಖ ತೋಡಿಕೊಂಡರು.
ಮೃತ ಯೋಧನ ತಂದೆ ಕೇದಾರಿ ಸತ್ಯಪ್ಪ ತೇಲಸಂಗ ಅವರು ಮಾತನಾಡಿ, ‘ನನ್ನ ಮಗ ಸೇನೆಗೆ ಸೇರಿ 14 ರಿಂದ 15 ತಿಂಗಳು ಆಗಿತ್ತು. ದಿನವೂ ಕರೆ ಮಾಡುತ್ತಿದ್ದ. 23ಕ್ಕೆ ರಜೆ ತೆಗೆದುಕೊಂಡಿದ್ದೇನೆ, ಮನೆಗೆ ಬರುತ್ತೇನೆ ಎಂದಿದ್ದ. ಹಾಗೂ 12 ಕಿಲೋ ಮೀಟರ್ ರನ್ನಿಂಗ್ ಇದೆ. ಅದನ್ನು ಮುಗಿಸಿದರೆ ಉನ್ನತ ಹುದ್ದೆ ಸಿಗಲಿದೆ ಎಂದಿದ್ದ’ ಎಂದಿದ್ದಾರೆ.
Laxmi News 24×7