ಧಾರವಾಡ, ಆಗಸ್ಟ್ 02: ಲೋಕಸಭಾ ಚುನಾವಣೆಯ (Loksabha Election) ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಮತಗಳ್ಳನ’ ಆಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಲೋಕಸಭೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ. ಒಂದು ವರ್ಷದವರೆಗೆ ನೀವು ಕತ್ತೆ ಕಾಯುತ್ತಿದ್ರಾ? ಎಂದು ವಾಗ್ದಾಳಿ ಮಾಡಿದರು.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ನಿಮಗೆ 136 ಸೀಟು ಕೊಟ್ಟಿದ್ದಾರೆ. ಇದೀಗ ಜನರು ಅಯೋಗ್ಯರಿಗೆ ಮತ ಹಾಕಿದೆವು ಅಂತ ಶಪಿಸುತ್ತಿದ್ದಾರೆ. ಲೋಕಸಭೆಯಲ್ಲಿ ಜನರು ನಮಗೆ ಮತ ಹಾಕಿದ್ದಕ್ಕೆ ಈ ವಿಚಾರ ಕೇಳುತ್ತಿದ್ದೀರಿ. ಸೋತ ಬಳಿಕ ಮತಗಳ್ಳತನವಾಗಿದೆ, ಆಯೋಗ ಸರಿಯಿಲ್ಲ ಅನ್ನುತ್ತೀರಿ. ಎಲ್ಲೆಲ್ಲಿ ಸೋಲುತ್ತೀರಿ ಆಗ ಇವಿಎಂ ಸರಿ ಇಲ್ಲ ಎನ್ನುತ್ತೀರಿ. ಗೆದ್ದಾಗ ಒಂದೇ ಒಂದು ಮಾತೂ ಆಡುವುದಿಲ್ಲ ಎಂದು ತಿರುಗೇಟು ನೀಡಿದರು.
ಚುನಾವಣೆಯಾಗಿ ಫಲಿತಾಂಶ ಘೋಷಣೆಯಾದ ಬಳಿಕ ಒಂದೇ ಒಂದು ಅರ್ಜಿ ಹಾಕಿದ್ದೀರಾ? ನೀವು ಕತ್ತೆ ಕಾಯಲು ಕೂಡ ಯೋಗ್ಯರಲ್ಲ. ನಮ್ಮ ಭಾರತದ ಕಣ ಕಣದಲ್ಲಿಯೂ ಪ್ರಜಾಪ್ರಭುತ್ವವಿದೆ. ರಾಜೀವ್ ಗಾಂಧಿ ಹತ್ಯೆಯಾದಾಗ ಇಡೀ ದೇಶದಲ್ಲಿಯೇ ಲೋಕಸಭಾ ಚುನಾವಣೆ ನಿಲ್ಲಿಸಿದಿರಿ. ರಾಜೀವ್ ಗಾಂಧಿ ಕ್ಷೇತ್ರದಲ್ಲಷ್ಟೇ ಚುನಾವಣೆ ನಿಲ್ಲಿಸಬೇಕಿತ್ತು. ಆದರೆ ಇಡೀ ದೇಶಾದ್ಯಂತ ಚುನಾವಣೆ ಸ್ಥಗಿತಗೊಳಿಸಿದಿರಿ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿಕೊಂಡರು. ಇದೀಗ ನಮಗೆ ಚುನಾವಣಾ ಆಯೋಗದ ಬಗ್ಗೆ ಹೇಳಲು ಬರುತ್ತಿದ್ದಾರೆ ಎಂದರು.