ಹಲಕರ್ಣಿ ಗ್ರಾಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ
ಮೂಲಭೂತ ಸೌಲಭ್ಯಗಳಿಗೆ ಸ್ಪಂದಿಸಿದ ಅಧಿಕಾರಿಯ ವರ್ಗಾವಣೆ!!!
ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಆಡಳಿತ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ರೇಷ್ಮಾ ಪಾನಿವಾಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಇಂದು ಬೃಹತ್ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
“ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿಲ್ಲ. ಎಲ್ಲೆಡೆ ಕೆಸರು ನೀರು ನಿಂತಿದೆ. ರಸ್ತೆಗಳು ಹದಗೆಟ್ಟಿವೆ, ಕುಡಿಯುವ ನೀರಿನ ಕೊರತೆ ಪ್ರಚಂಡವಾಗಿದೆ” “ಎಂಟು ದಿನದಲ್ಲಿ ಒಂದೇ ದಿನ ನೀರು ಬರುತ್ತದೆ, ಹೊಸ ಟ್ಯಾಂಕರ್ ಖರೀದಿಸಿದ್ದರೂ ಬಳಕೆಯಾಗುತ್ತಿಲ್ಲ” ಎಂಬುದು ಜನರ ಆರೋಪವಾಗಿದೆ. ಪಿಡಿಒ ಅವರ ನಿರ್ಲಕ್ಷ್ಯ ಮತ್ತು ಉದಾಸೀನತೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಪಂಚಾಯತಿ ಕಾರ್ಯಾಲಯದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ನರಳುತ್ತಿರುವ ಈ ಸಂದರ್ಭದಲ್ಲಿ, ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಯನ್ನು ಬದಲಿಸಿರುವುದು ಮತ್ತಷ್ಟು ಬೇಸರ ಹುಟ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಆಧಿಕಾರಿಗಳನ್ನು ಬದಲಾಯಿಸುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಪಿಡಿಒ ಅವರ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಗ್ರಹಿಸಲಾಗಿದೆ