ಕೋಲಾರ: ಕೋಲಾರದ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಹೆಚ್.ನಾಗೇಶ್ ವಿರುದ್ಧ ಪ್ರಧಾನ ಮಂತ್ರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪದ ದೂರು ದಾಖಲಾಗಿದೆ. ಅಬಕಾರಿ ಅಧಿಕಾರಿಯೊಬ್ಬರ ವರ್ಗಾವಣೆಗೆ ಒಂದು ಕೋಟಿ ರೂಪಾಯಿ ಲಂಚಕ್ಕೆ ಒತ್ತಾಯಿಸಿರುವ ಆರೋಪದ ಮೇಲೆ ಸಚಿವ ಹೆಚ್.ನಾಗೇಶ್ ಅವರ ವಿರುದ್ದ ಸಲ್ಲಿಕೆಯಾಗಿರುವ ದೂರು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಯ ಪುತ್ರಿಯೊಬ್ಬರು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿರುವ ಈ ದೂರು ರಾಜ್ಯದ ಇ-ಜನಸ್ಪಂದನ ವಿಭಾಗದಲ್ಲಿಯೂ ಸಹ ಅಧಿಕೃತವಾಗಿ ದಾಖಲಾಗಿದೆ ಎನ್ನಲಾಗಿದೆ.
ಪತ್ರದಲ್ಲಿನ ಅಂಶಗಳು
ಜುಲೈ ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಬೆಂಗಳೂರಲ್ಲಿ ಖಾಲಿಯಿದ್ದ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆಗಾಗಿ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಮನವಿ ಮಾಡಿದಾಗ ಅಬಕಾರಿ ಸಚಿವರು ಒಂದು ಕೋಟಿ ರೂಪಾಯಿ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಲಂಚ ಕೊಡುವುದಕ್ಕೆ ಅಧಿಕಾರಿಯು ನಿರಾಕರಿಸಿದ್ದಕ್ಕಾಗಿ ರಜೆ ಮೇಲೆ ತೆರಳಲು ಸಚಿವರು ಬಲವಂತ ಮಾಡಿದರು. ಅದಕ್ಕೆ ಒಪ್ಪದ ಕಾರಣ ಮಾನಸಿಕ ಹಿಂಸೆ ಕೊಡಲಾಗುತ್ತಿದೆ. ಇನ್ನು ಹೆಚ್.ನಾಗೇಶ ಅವರ ಲಂಚಗುಳಿತನ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ್ ಅವರಿಗೆ ಮಾಹಿತಿಯನ್ನು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ಒಂದು ತಿಂಗಳಿನಿಂದಲೂ ಅಬಕಾರಿ ಇಲಾಖೆಯಲ್ಲಿ ಲಂಚದ ಹಣವನ್ನು ಪಡೆದುಕೊಳ್ಳುವ ಮೂಲಕವೇ ಆರು ನೂರಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯು ಆಗಿದೆ. ಕೋಲಾರದ ಮೂಲದ ಎಲ್ಎ.ಮಂಜುನಾಥ ಮತ್ತು ಹರ್ಷ ಎನ್ನುವ ದಲ್ಲಾಳಿಗಳನ್ನು ಇರಿಸಿಕೊಂಡು ಸಚಿವರು ಅಕ್ರಮ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ಆದರ್ಶಗಳನ್ನು ಪಾಲಿಸುತ್ತಿರುವ ನಾನು ಇದೀಗ ತಮ್ಮ ಮೇಲೆ ಕೊನೆಯ ಭರವಸೆಯನ್ನು ಇರಿಸಿಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಅಧಿಕಾರಿಯ ಪುತ್ರಿ ಪತ್ರದಲ್ಲಿ ವಿವರಿಸಿದ್ದಾರೆ.
ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂಗಳಕ್ಕೆ ಚೆಂಡು ಹೋಗಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ.
Laxmi News 24×7