ಹುಬ್ಬಳ್ಳಿ: ಸ್ವಚ್ಛ ಭಾರತ್ ಮಿಷನ್‌ನಡಿ ಕೇಂದ್ರೀಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ ಸ್ವಚ್ಛ ಸರ್ವೇಕ್ಷಣ-2025ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಗಣನೀಯ ಸಾಧನೆ ಮಾಡಿದ್ದು, ರಾಜ್ಯದ ಎರಡನೇ ಸ್ವಚ್ಚ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ.
ಹುಬ್ಬಳ್ಳಿ-ಧಾರವಾಡ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳ ಪೈಕಿ ಕರ್ನಾಟಕದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಕಳೆದ ವರ್ಷ 87ನೇ ಸ್ಥಾನದಲ್ಲಿದ್ದ ಅವಳಿನಗರ 2025ರಲ್ಲಿ 34ನೇ ಸ್ಥಾನಕ್ಕೆ ಏರಿದೆ.
ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ತ್ಯಾಜ್ಯ ನಿರ್ವಹಣೆ, ತಂತ್ರಜ್ಞಾನ ಬಳಕೆ, ಮೂಲಸೌಕರ್ಯಗಳ ಅಭಿವೃದ್ದಿಯ ಅಂಶಗಳನ್ನು ಒಳಗೊಂಡಿದೆ. ವಿಶೇಷವೆಂದರೆ, ಈ ಬಾರಿ ಅವಳಿ ನಗರ ವಾಟರ್ ಪ್ಲಸ್ ವಿಭಾಗದಲ್ಲಿ ಸ್ಥಾನ ಪಡೆದ ಮೂರು ನಗರಗಳ ಪೈಕಿ ಒಂದಾಗಿದೆ.
ಟಾರಿಫೈಡ್ ಚಾರ್ಕೋಲ್ ಉತ್ಪಾದನಾ ಘಟಕ ಉದ್ಘಾಟನೆಗೆ ಸಜ್ಜು: ಸ್ಟಾರ್ ರೇಟಿಂಗ್ನಲ್ಲಿ ಈ ಬಾರಿ ಅವಳಿ ನಗರಕ್ಕೆ ಒಂದು ಸ್ಟಾರ್ ಲಭಿಸಿದೆ. ಮುಂದಿನ ಬಾರಿ ಫೈವ್ ಸ್ಟಾರ್ ಪಡೆಯುವ ಎಲ್ಲ ಅರ್ಹತೆಯನ್ನು ಅವಳಿನಗರ ಹೊಂದಿದ್ದು ಅದಕ್ಕಾಗಿ ಪಾಲಿಕೆ ಎಲ್ಲ ರೀತಿಯಲ್ಲೂ ಕಾರ್ಯ ನಿರ್ವಹಿಸುತ್ತಿದೆ. ತ್ಯಾಜ್ಯ ನಿರ್ವಹಣೆಗಾಗಿ ಪಾಲಿಕೆ ಈಗಾಗಲೇ ಎನ್ಟಿಪಿಸಿ ಜೊತೆ ಒಪ್ಪಂದ ಮಾಡಿಕೊಂಡು, ಒಣ ಕಸ ಬಳಸಿಕೊಂಡು ಟಾರಿಫೈಡ್ ಚಾರ್ಕೋಲ್ ಉತ್ಪಾದನಾ ಘಟಕ ವರ್ಷಾಂತ್ಯಕ್ಕೆ ಉದ್ಘಾಟನೆಯಾಗಲಿದೆ.
ಸುಧಾರಣೆಯ ಭರವಸೆ ಇದೆ- ಪಾಲಿಕೆ ಆಯುಕ್ತರು: ಹಸಿ ಕಸದಿಂದ ಕಂಪ್ರೆಸ್ಡ್ ಬಯೋ ಗ್ಯಾಸ್ ತಯಾರಿಕಾ ಘಟಕ ನಿರ್ಮಾಣಕ್ಕೆ ಬಿಪಿಸಿಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ. ಗುಜರಾತ್ನ ಡಿ.ಹೆಚ್.ಪಟೇಲ್ ಕಂಪನಿಯ ಸಹಭಾಗಿತ್ವದಲ್ಲಿ ಈಗಾಗಲೇ ಶೇ.50ರಷ್ಟು ಲೀಗಸಿ ವೇಸ್ಟ್ ವಿಲೇವಾರಿಯಾಗಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಸಂಪೂರ್ಣ ವಿಲೇವಾರಿ ಆಗಲಿದೆ. ಈ ಎಲ್ಲ ಪ್ರಯತ್ನಗಳಿಂದ ಮುಂದಿನ ವರ್ಷ ಫೈವ್ ಸ್ಟಾರ್ ರೇಟಿಂಗ್ ಮತ್ತು ರಾಜ್ಯದಲ್ಲಿ ಮೊದಲನೇ ಸ್ಥಾನ, ರಾಷ್ಟ್ರಮಟ್ಟದ ಸ್ಥಾನದಲ್ಲಿ ಸುಧಾರಣೆಯಾಗುವ ಭರವಸೆ ಇದೆ ಎಂದು ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.