ಬೆಂಗಳೂರು: ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವ ವಿಚಾರವಾಗಿ ಸೋದರ ಸಂಬಂಧಿಯನ್ನ ಹೆದರಿಸಲು ಸಾರ್ವಜನಿಕರ ಮೇಲೆ ಲಾಂಗ್ ಹಾಗೂ ಕಬ್ಭಿಣದ ರಾಡ್ ನಿಂದ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿ ರವಿ ಹಾಗೂ ತಲೆಮರೆಸಿಕೊಂಡಿರುವ ಮೂವರು ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೋರ್ಟರ್ ಬಾಯ್ ಆಗಿ ಕೆಲಸ ಮಾಡಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳು ಏಕಾಏಕಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಪವನ್ ಆರೋಪಿಸಿದ್ದಾರೆ.
ಸೋದರ ಸಂಬಂಧಿಯನ್ನ ಭಯ ಬೀಳಿಸಲು ರಸ್ತೆಯಲ್ಲಿ ಹೋಗುತ್ತಿದ್ದ ನಾಲ್ವರ ವಿರುದ್ಧ ಕಬ್ಭಿಣದ ರಾಡ್ ಹಾಗೂ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ. ಜುಲೈ 13ರಂದು ರಾತ್ರಿ ನಂದಿನಿ ಲೇಔಟ್ ನ ಕಂಠೀರವ ನಗರದಲ್ಲಿ ಆರೋಪಿಗಳು ಹಲ್ಲೆ ಮಾಡಿದ್ಧಾರೆ. ಹಲ್ಲೆ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕಂಠೀರವ ನಗರದಲ್ಲಿ ಜಗದೀಶ್ ಎಂಬುವರು ಲಕ್ಷ್ಮೀ ಫೋಟೊ ಪ್ರೇಮ್ ಶಾಪ್ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಅಕ್ಕನ ಮಗಳನ್ನ ಮದುವೆಯಾಗಲು ಚಿಕ್ಕಮ್ಮನ ಮಗನಾಗಿರುವ ಆರೋಪಿ ರವಿ ಮುಂದಾಗಿದ್ದ. ಇದಕ್ಕೆ ಜಗದೀಶ್ ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಅಕ್ರೋಶಗೊಂಡ ರವಿ ಜುಲೈ 13ರಂದು ಅಂಗಡಿ ಬಳಿ ಸಹಚರರೊಂದಿಗೆ ಆಟೊದಲ್ಲಿ ತೆರಳಿ ಧಮಕಿ ಹಾಕಿದ್ದ ಎಂದು ಆರೋಪಿಸಲಾಗಿದೆ. ಜಗದೀಶ್ ನನ್ನ ಭಯಬೀಳಿಸಲು ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾಂಗ್ ಬೀಸಿದ್ದ. ಘಟನೆಯಲ್ಲಿ ದೂರುದಾರ ಪವನ್, ವೆಂಕಟೇಶ್, ಸ್ಯಾಮನ್ಸ್ ಎಂಬುವರಿಗೆ ಗಾಯವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ರವಿ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.