ಬೆಳಗಾವಿ: ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಖ್ಯಾತಿಗೆ ಪಾತ್ರವಾಗಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಲವು ಆಕರ್ಷಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಒಟ್ಟು 6.41 ಕೋಟಿ ವೆಚ್ಚದಲ್ಲಿ ಭರದಿಂದ ಕಾಮಗಾರಿಗಳು ನಡೆಯುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ಮೃಗಾಲಯದ ಚಿತ್ರಣವೇ ಬದಲಾಗಲಿದೆ.
ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ರಜಾ ದಿನಗಳಲ್ಲಿ ಇಲ್ಲಿ ಜನಜಾತ್ರೆ. ಕುಟುಂಬ ಸಮೇತರಾಗಿ ಬಂದು ಇಲ್ಲಿನ ಪ್ರಾಣಿ-ಪಕ್ಷಿಗಳನ್ನು ಕಣ್ತುಂಬಿಕೊಂಡು ಟೈಗರ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡುತ್ತಾರೆ. ಈ ವರ್ಷದ ಏ.1ರಿಂದ ಜೂನ್ ಅಂತ್ಯದವರೆಗೆ 70 ಸಾವಿರ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದು, 60 ಲಕ್ಷ ರೂ. ಆದಾಯ ಬಂದಿದೆ.